ಹಕ್ಕಿಜ್ವರ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

FotoJet (1)
Published on

ಮುಂದುವರಿದ ಕೋಳಿ ಮಾರಾಟ, ಸಾಗಣೆ ಪ್ರಕ್ರಿಯೆ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಚಿಂತಾಮಣಿ: ಜಿಲ್ಲೆಯಲ್ಲಿ ಹಕ್ಕಿಜ್ವರ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಆತಂಕ ವ್ಯಕ್ತವಾಗಿರುವುದರ ನಡುವೆ ಹೊರ ರಾಜ್ಯಗಳಿಂದ ಕೋಳಿಗಳ ಮಾರಾಟ, ಸಾಗಣೆ ಪ್ರಕ್ರಿಯೆ ಮುಂದುವರಿದಿದ್ದು, ಸೋಂಕು ಪ್ರಕರಣ ಹೆಚ್ಚುವ ಮಾತುಗಳು ಕೇಳಿ ಬರುತ್ತಿವೆ.

ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿಯಲ್ಲಿ ಹಕ್ಕಿಜ್ವರಕ್ಕೆ 36 ಕೋಳಿಗಳು ಮೃತಪಟ್ಟಿವೆ. ಇದರಿಂದ ಆರೋಗ್ಯ, ಕಂದಾಯ ಹಾಗೂ ಗ್ರಾಪಂ ಸಿಬ್ಬಂದಿ ಗ್ರಾಮದಲ್ಲಿ ಠಿಕಾಣಿ ಹೂಡಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಅಲ್ಲಿನ ಕೋಳಿಗಳನ್ನು ಸಾಯಿಸಿ, ವೈಜ್ಞಾನಿಕವಾಗಿ ವಿಲೇವಾರಿಗೊಳಿಸಲಾಗಿದೆ. ಹಾಗೆಯೇ ಗ್ರಾಮದಿಂದ ಹೊರ ಭಾಗಕ್ಕೆ, ಹೊರ ಭಾಗದಿಂದ ಗ್ರಾಮಕ್ಕೆ ಕೋಳಿಗಳು ಸಾಗಣೆಯಾಗದಂತೆ ಎಚ್ಚರ ವಹಿಸಲಾಗಿದೆ. ಇದರ ನಡುವೆ ನೆರೆಯ ಆಂಧ್ರ ಭಾಗದಲ್ಲೂ ಹಕ್ಕಿಜ್ವರದ ಪ್ರಕರಣಗಳು ವರದಿಯಾಗುತ್ತಿದ್ದು ಇದರ ಅರಿವಿದ್ದರೂ ಜಿಲ್ಲೆಗೆ ಬೇರೆ ಭಾಗಗಳಿಂದ ಕೋಳಿಗಳು ಸಾಗಣೆಯಾಗುವುದನ್ನು ತಡೆಯುವ ಕೆಲಸವಾಗುತ್ತಿಲ್ಲ. ಹಳ್ಳಿ ಸಂತೆಯಲ್ಲಿ ನಿರಾತಂಕವಾಗಿ ವಹಿವಾಟು ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕಡೆಗಣಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುಟ್ಟೂರಿನಲ್ಲಿ ಕೋಳಿಗಳ ಸಾವು

ಚಿಂತಾಮಣಿ ತಾಲೂಕಿನ ಕೆಂಚಾರ‌್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಗುಟ್ಟೂರು ಗ್ರಾಮದಲ್ಲಿನ ಕೋಳಿ ಫಾರಂನಲ್ಲೂ 15ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಇದಕ್ಕೆ ಕಾರಣ ಹುಡುಕುತ್ತಿರುವುದರ ನಡುವೆ ಭಾನುವಾರ ನಡೆದ ಸಂತೆಗೆ ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಟಿ ಕೋಳಿಗಳು ಬಂದಿವೆ. ಈ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸಹ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂಬ ದೂರು ಕೇಳಿಬಂದಿದೆ.

ಪರಿಹಾರ ಕ್ರಮಕ್ಕೆ ಒತ್ತಾಯ

ಹೊರ ರಾಜ್ಯದ ಕೋಳಿಗಳ ಸಾಗಾಣೆ ಹಾಗೂ ಮಾರಾಟದ ಬಗ್ಗೆ ಸ್ಥಳೀಯ ಜನರು ಆಡಳಿತ ಯಂತ್ರಾಂಗದ ಗಮನ ಸೆಳೆದು, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದ್ದಾರೆ. ಹಕ್ಕಿ ಜ್ವರ ಪ್ರಕರಣಗಳ ಪತ್ತೆ, ಆತಂಕ ವಾತಾವರಣ ನಿರ್ಮಾಣವಾಗಿರುವುದರ ನಡುವೆ ಹೊರ ಭಾಗಗಳಿಂದ ಹಕ್ಕಿಗಳ ಸಾಗಣೆ ಮತ್ತು ಮಾರಾಟಕ್ಕೆ ಅವಕಾಶ ನೀಡದಿರಲು ತಾತ್ಕಾಲಿಕ ಸಂತೆಗಳನ್ನು ನಿಷೇಧಿಸಬೇಕೆಂಬ ಮನವಿ ಕೇಳಿ ಬಂದಿದೆ.

ಕೋಳಿ ರಕ್ತದ ಮಾದರಿ ಸಂಗ್ರಹ

ಇಲ್ಲಿನ ಪಶುಸಂಗೋಪನೆ ಮತ್ತು ಪಶುಪಾನಾ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಂ.ಎನ್.ಚನ್ನಕೇಶವರೆಡ್ಡಿ ನೇತೃತ್ವದ ತಂಡವು ಭಾನುವಾರದ ಸಂತೆಯ ಸ್ಥಳಗಳಿಗೆ ಭೇಟಿ ನೀಡಿ, ಕೋಳಿಗಳ ರಕ್ತದ ಮಾದರಿ ಸಂಗ್ರಹಿಸಿತು.

ಶ್ವಾಸನಾಳ ಮತ್ತು ಕ್ಲೋಕಲ್ ಮತ್ತು ರಕ್ತದ ಮಾದರಿಗಳನ್ನು ಪಡೆಯುವುದರ ಜತೆಗೆ ಜನರಲ್ಲಿ ಅರಿವು ಮೂಡಿಸಲಾಯಿತು. ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಈಗಾಗಲೇ ಚಿಂತಾಮಣಿ ನಗರ ವ್ಯಾಪ್ತಿಯ ಕೋಳಿ ಮಾಂಸ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದೆ. ಎಲ್ಲೆಂದರಲ್ಲಿ ಕೋಳಿ ತ್ಯಾಜ್ಯವನ್ನು ಎಸೆಯುವುದನ್ನು ನಿಷೇಧಿಸಿದ್ದು ರಾಸಾಯನಿಕವನ್ನು ಸಿಂಪಡಿಸಿ ಚೀಲದಲ್ಲಿ ಕಟ್ಟಿ ನಗರಸಭೆಯ ವಾಹನಗಳಿಗೆ ನೀಡುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net