

ಅರಕೇರಾ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಭತ್ತ ರೈತರು ಬೆಳೆ ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿಂಗಾರು ಹಂಗಾಮಿನ ಭತ್ತದ ಬೆಳೆ ಕೈಗೆ ಸೇರುವ ಹೊತ್ತಲ್ಲಿ, ಅಕಾಲಿಕವಾಗಿ ಸುರಿದ ಮಳೆಗೆ ಭತ್ತ ನೀರು ಪಾಲಾಗಿದೆ. ಕೆಲ ಕಡೆ ನೀರಿನ ರಭಸಕ್ಕೆ ಜಮೀನುಗಳಲ್ಲಿಯೇ ಬೆಳೆ ನೆಲಕ್ಕುರುಳಿದೆ.
ಪ್ರತಿ ಎಕರೆಗೆ 30-35 ಸಾವಿರ ರೂ. ಖರ್ಚು ಮಾಡಿದ್ದ ರೈತರು, 60-70 ಸಾವಿರ ರೂ. ಲಾಭದ ನಿರೀಕ್ಷೆಯಲಿದ್ದರು. ಮುಷ್ಟೂರು, ನಾಗಡದಿನ್ನಿ, ಕೊತ್ತದೊಡ್ಡಿ, ಬಿ.ಗಣೇಕಲ್, ಜಾಗೀರ ಜಾಡಲದಿನ್ನಿ, ಆಲ್ಕೋಡ ಗ್ರಾಪಂ ವ್ಯಾಪ್ತಿಯ ಕೆಲಕಡೆ 8,638 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು.
ಇನ್ನೂ ಕೆಲ ರೈತರು ಕಟಾವು ಮಾಡಿ ರಾಶಿಗೆ ಮಳೆ ನೀರು ನುಗ್ಗಿದ್ದು, ಮಳೆಗೆ ಕೊಚ್ಚಿ ನಷ್ಟವಾಗಿದೆ. ರೈತರಿಗೆ ಕೆಲ ಕಡೆ ಸೂಕ್ತ ದಾಸ್ತಾನು ಸಂಗ್ರಹ ಗೋದಾಮು ಇಲ್ಲದ ಕಾರಣ ತಮ್ಮ ಹೊಲ ಅಥವಾ ಬಯಲು ಪ್ರದೇಶದಲ್ಲಿ ಕಟಾವು ಮಾಡಿದ ಭತ್ತ ರಾಶಿ ಮಾಡಿದ್ದರು.