

ಹಗರಿಬೊಮ್ಮನಹಳ್ಳಿ: ಭಾಷಾಂತರ ಸಾಹಿತ್ಯದಿಂದ ಪ್ರಾದೇಶಿಕ ಸಂಸ್ಕೃತಿಯ ಅರಿವು, ಜ್ಞಾನದ ವಿನಿಮಯ ಹಾಗೂ ಸಂಬಂಧಗಳ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಜಿವಿಪಿಪಿ ಸರ್ಕಾರಿ ಕಾಲೇಜಿನ ಬುದ್ಧ ಬಸವ ಅಂಬೇಡ್ಕರ್ ಸಭಾಭವನದಲ್ಲಿ ಕನ್ನಡ ವಿವಿಯ ಭಾಷಾಂತರ ಅಧ್ಯಯನ ವಿಭಾಗ, ವೈ.ಕೆ.ರಾಮಯ್ಯ ದತ್ತಿನಿಧಿ ಮತ್ತು ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಿಂದ ಏರ್ಪಡಿಸಿದ್ದ ‘ಭಾಷಾಂತರ ಮತ್ತು ಕರ್ನಾಟಕ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಭಾಷಾಂತರ ಸಾಹಿತ್ಯವನ್ನು ವೈಯಕ್ತಿಕ, ಸಾಮುದಾಯಿಕವಾಗಿ ವಿಭಜಿಸಬಹುದಾಗಿದ್ದು, ಇದೊಂದು ನಿರಂತರ ಪ್ರಕ್ರಿಯೆ. ಜನರ ಜೀವನ ಶೈಲಿಯಲ್ಲಿಯೇ ಹಾಸುಹೊಕ್ಕಾಗಿದೆ. ಭಾಷಾಂತರದಿಂದ ಭಾವಾಂತರವಾಗಿ ಪರಿವರ್ತನೆಯಾಗಲಿದೆ. ಇತ್ತೀಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಮೂಲ ಕೃತಿಕಾರನಿಗೆ ಸಿಗುವ ಆದ್ಯತೆ ಅನುವಾದಕಾರನಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳು ಮತ್ತು ಕನ್ನಡ ಭಾಷೆ ಕುರಿತು ಪ್ರಾಧ್ಯಾಪಕಿ ಡಾ.ತಮಿಳು ಸೆಲ್ವಿ ಮಾತನಾಡಿ, ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕವನ ಸಂಕಲನ ಆಂಗ್ಲ ಮತ್ತು ಸ್ವೀಡನ್ ಭಾಷೆಗೆ ಅನುವಾದ ಆಗದಿದ್ದರೆ ಭಾರತಕ್ಕೆ ನೊಬೆಲ್ ಸಿಗುತ್ತಿರಲಿಲ್ಲ. ಸಾಹಿತ್ಯ ಪ್ರಕಾರಗಳ ವೈವಿಧ್ಯತೆ ಭಾಷಾಂತರದಿಂದ ಮಾತ್ರ ಸಾಧ್ಯ. ಸಂಸ್ಕೃತಿಗಳ ಸಾಮ್ಯ ಮತ್ತು ವೈಷಮ್ಯ ಅರಿಯಲು ಭಾಷಾಂತರ ತುಂಬ ಅನುಕೂಲವಾಗಿದೆ. ಇಡೀ ದೇಶದಲ್ಲಿ ಹೆಚ್ಚು ಬಳಕೆಯಾಗುವ ಭಾಷೆಗಳು ಹಿಂದಿ, ತೆಲುಗು. ಆದರೆ ಕೇವಲ ತಲಾ ಎರಡು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿವೆ. ಕರ್ನಾಟಕ 8 ಜನ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಇದುವೇ ಕನ್ನಡ ಭಾಷೆಯ ಹಿರಿಮೆಯಾಗಿದೆ ಎಂದರು.
ಮಲಯಾಳಂ ಮತ್ತು ಕನ್ನಡ ವಿಷಯ ಕುರಿತು ಡಾ.ಎಂ.ರತ್ನಾಕರ ಮಲ್ಲಮೂಲೆ, ಮರಾಠಿ ಮತ್ತು ಕನ್ನಡ ವಿಷಯದ ಬಗ್ಗೆ ಡಾ.ಶೋಭಾ ನಾಯಕ್, ತೆಲುಗು ಮತ್ತು ಕನ್ನಡ ವಿಷಯದ ಬಗ್ಗೆ ಡಾ.ಪಿ.ಮಂಜಣ್ಣ ಮಾತನಾಡಿದರು. ಮೊದಲ ಗೋಷ್ಠಿಯಲ್ಲಿ ಸಾಹಿತಿ ಮೇಟಿ ಕೊಟ್ರಪ್ಪ, 2ನೇ ಗೋಷ್ಠಿಯಲ್ಲಿ ಸಿ.ದೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಾಹಿತ್ಯಾಸಕ್ತರಿಂದ ಸಂವಾದ ನಡೆಸಲಾಯಿತು.
ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿದರು. ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎ.ಮೋಹನ್ ಕುಂಟಾರ್ ಪ್ರಾಸ್ತಾವಿಕ ನುಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಕೆ.ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಮಲ್ಲಿಕಾರ್ಜುನ, ಸಹಪ್ರಾಧ್ಯಾಪಕಿ ಡಾ.ಕೆ.ಯಲ್ಲಮ್ಮ, ಪ್ರಮುಖರಾದ ಡಾ.ಎಸ್.ಪಿ.ನಾಗನಗೌಡ, ತೊಪ್ಪಲ ಕೆ.ಮಲ್ಲಿಕಾರ್ಜುನ, ಡಾ.ನಾಗಣ್ಣ ಕಿಲಾರಿ ಇದ್ದರು. ಪ್ರಾಧ್ಯಾಪಕರಾದ ಬಡಿಗೇರ ವೀರೇಶ್, ಅಕ್ಕಿ ಬಸವೇಶ್ ನಿರ್ವಹಿಸಿದರು.