ಭಾಷಾಂತರ ಅವಶ್ಯ ಮಾತ್ರವಲ್ಲ, ಅನಿವಾರ್ಯ: ಪ್ರೊ.ಲಕ್ಷ್ಮೀನಾರಾಯಣ ಆರೋರ ಅಭಿಮತ

18
Published on

ಮೈಸೂರು: ನಮ್ಮ ಜೀವನದಲ್ಲಿ ಭಾಷಾಂತರ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿದೆ. ಇಂದು ಭಾಷಾಂತರವಿಲ್ಲದೆ ಏನು ನಡೆಯುವುದಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಲಕ್ಷ್ಮೀನಾರಾಯಣ ಆರೋರ ಅಭಿಪ್ರಾಯಪಟ್ಟರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆಂಗ್ಲಭಾಷಾ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ಭಾಷಾಂತರ, ಸಾಹಿತ್ಯ ಮತ್ತು ಉದ್ಯೋಗಾವಕಾಶ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಭಾಷಾಂತರ ತರಬೇತಿ ಇಂದು ಅವಶ್ಯವಾಗಿದೆ. ಎನ್‌ಇಪಿ ಅಡಿಯಲ್ಲಿ ಭಾಷಾ ಕಲಿಕೆಗೆ ಅದ್ಯತೆ ನೀಡಿದ್ದು, ಭಾಷಾಂತರಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ. ಭಾಷಾಂತರ ಅವಶ್ಯಕ ಮಾತ್ರವಲ್ಲ, ಅನಿವಾರ್ಯವಾಗಿದೆ. ಇದು ಅನೇಕ ಉದ್ಯೋಗಾವಕಾಶಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಭಾರತ ಬಹುಭಾಷೀಯ ಕ್ಷೇತ್ರವಾಗಿದ್ದು ಶ್ರೀಮಂತವಾದ ಪರಂಪರೆ, ವೈವಿಧ್ಯಮಯವಾದ ಸಾಂಸ್ಕೃತಿಕ ಹಿನ್ನೆಲೆಗಳನ್ನು ಹೊಂದಿದೆ. ದೇಶದಲ್ಲಿ ವೈದಿಕ ಸಾಹಿತ್ಯದ ನಂತರ ಭಾಷಾಂತರಗಳು ಕಂಡುಬರುತ್ತವೆ. ಸಂಸ್ಕೃತದ ನಂತರ ಪ್ರಾಕೃತ, ಅಪಭ್ರಂಶ ಕನ್ನಡ ಭಾಷೆಗಳಲ್ಲಿ ರಾಮಾಯಣ, ಮಹಾಭಾರತಗಳು ಅಭಿಜಾತ ಸಾಹಿತ್ಯವಾಗಿ ಮೂಡಿಬಂದಿವೆ. ಬಾಣಭಟ್ಟನ ಕಾದಂಬರಿ ಒಂದನೇ ನಾಗವರ್ಮನಿಂದ ಚಂಪೂವಿನಲ್ಲಿ ಕರ್ಣಾಟಕ ಕಾದಂಬರಿಯಾಗಿ ಅನುವಾದಗೊಂಡಿತು ಎಂದರು.
20ನೇ ಶತಮಾನದಲ್ಲಿ ಲಾರ್ಡ್ ಮೆಕಾಲೆಯ ಕಾರಣದಿಂದ ಭಾರತೀಯ ಶಿಕ್ಷಣ ಪದ್ಧತಿ ಬದಲಾಯಿತು. ಕ್ರೈಸ್ತ ಮಿಷನರಿಗಳು ನಮ್ಮ ಭಾರತೀಯ ಭಾಷೆಗಳನ್ನು ಕಲಿತು ಅನುವಾದಕ್ಕೆ ಮುಂದಾದರು. ಆಂಗ್ಲಭಾಷಾ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಪರಿಚಯವಾಗಿ ಅನುವಾದಕ್ಕೆ ವಿಶೇಷ ಒತ್ತು ನೀಡಲಾಯಿತು. ಇಂದಿನ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಮಾತೃಭಾಷೆಯಲ್ಲಿ ಕಲಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಇಂದು ಭಾಷಾಂತರ ಎಲ್ಲ ಕ್ಷೇತ್ರಗಳ ತುರ್ತಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಸಮೂಹ ಮಾಧ್ಯಮಗಳಾದ ರೇಡಿಯೋ, ಟಿವಿಗಳಲ್ಲಿ ಭಾಷಾಂತರಕಾರರಿಗೆ ಬಹು ಬೇಡಿಕೆ ಇದೆ. ಟಿವಿ ಕಾರ್ಯಕ್ರಮಗಳಲ್ಲಿ ಉಪಶೀರ್ಷಿಕೆಗಳು ಅನಿವಾರ್ಯವಾಗಿ ಸ್ಥಳೀಯ ಭಾಷೆಗಳಲ್ಲಿ ನೀಡಬೇಕಿದೆ. ವೃತ್ತಿ/ಹವ್ಯಾಸಿ ಭಾಷಾಂತರಕಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಿಂದ ನೋಡಿದರೆ ಭಾಷಾಂತರದ ಕೌಶಲವು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದೆ. ಆದ್ದರಿಂದ ಇಂದು ಭಾಷಾಂತರ ಬಹಳ ಮುಖ್ಯವಾದ ಕಲಿಕೆಯಾಗಿದೆ ಎಂದು ಹೇಳಿದರು.
ಬಳಿಕ ಆಯೋಜಿಸಿದ್ದ ವಿವಿಧ ಗೋಷ್ಠಿಗಳಲ್ಲಿ ಡಾ.ಉದಯರವಿ ಶಾಸ್ತ್ರಿ, ಡಾ.ಎಸ್.ವಿನ್ಸ್‌ಟನ್ ಕ್ರುಜ್, ಡಾ.ಎಂ.ಗಿರಿಜಮ್ಮ ಭಾಷಾಂತರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಉಪನ್ಯಾಸ ನೀಡಿದರು. 9 ಅಧ್ಯಾಪಕರು ಭಾಷಾಂತರಕ್ಕೆ ಸಂಬಂಧಿಸಿದ ವಿಷಯ ಮಂಡಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net