

ತುಮಕೂರು: ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಇದು. ಜಾತಿಯ ಚುನಾವಣೆ ಇದಲ್ಲ, ಎಲ್ಲಾ ಜಾತಿಯವರೂ ಸೋಮಣ್ಣರನ್ನು ಆಶೀರ್ವದಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಕರೆಯಿತ್ತರು.
ಮೈಸೂರಿನಲ್ಲಿ ಎನ್‌ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಲಿಕ್ಯಾಪ್ಟರ್‌ನಲ್ಲಿ ನೇರವಾಗಿ ತುಮಕೂರಿಗೆ ಆಗಮಿಸಿ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣರ ರೋಡ್ ಶೋನಲ್ಲಿ ಭಾಗವಹಿಸಿದರು.
ನಗರದ ಗಣೇಶ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ಪೂಜೆ ಸಲ್ಲಿಸಿದ ಬಳಿಕ ಆರಂಭವಾದ ರೋಡ್ ಶೋ ಟೌನ್‌ಹಾಲ್ ರಸ್ತೆ ಮೂಲಕ ಎಂಜಿ ರಸ್ತೆಗೆ ಆಗಮಿಸುವ ಹೊತ್ತಿಗೆ ಕೂಡಿಕೊಂಡ ಎಚ್ಡಿಕೆ ಪ್ರಚಾರ ರಥ ಏರುತ್ತಿದ್ದಂತೆ ಮೆರವಣಿಗೆಯಲ್ಲಿ ವಿದ್ಯುತ್ ಸಂಚಲನ ಸೃಷ್ಟಿಸಿತು. ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು. ಈ ವೇಳೆ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಎಚ್ಡಿಕೆ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗೆ ಜನ ಬೇಸತ್ತಿದ್ದಾರೆ. ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬಿಟ್ಟರೆ ರಾಜ್ಯದ ಸಂಕಷ್ಟ ನಿವಾರಣೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಈ ಸರ್ಕಾರ. ಬರದಿಂದ ರೈತರು, ಜನ ತತ್ತರಿಸಿ ಹೋಗಿದ್ದಾರೆ ಅವರ ನೆರವಿಗೆ ಸ್ಪಂದಿಸುತ್ತಿಲ್ಲ ಎಂಬ ಅಸ್ತ್ರವನ್ನು ಪ್ರಯೋಗಿಸಿ ಜಿದ್ದಾಜಿದ್ದಿನ ಹೋರಾಟದ ಸುಳಿವು ನೀಡಿದರು.
ನುಡಿದಂತೆ ನಡೆದಿದ್ದೇವೆ ಎಂದು ಪ್ರಚಾರ ಪಡೆಯುವ ಕಾಂಗ್ರೆಸ್ಸಿಗರು ಈ ಪ್ರಚಾರದ ಜಾಹೀರಾತಿಗಾಗಿ ರಾಜ್ಯದ ಜನತೆಯ 300 ಕೋ.ರೂ., ತೆರಿಗೆ ಹಣವನ್ನು ವ್ಯಯಿಸಿದ್ದಾರೆ. ಆದರೆ, ಬರ ಪರಿಹಾರ ಕಾರ್ಯಗಳಿಗೆ ನೆರವಾಗಿಲ್ಲ. ಕಾಂಗ್ರೆಸ್‌ನವರು ಗ್ಯಾರಂಟಿ ಯೋಜನೆಗಳಿಗೆ ಸಾಲ ಮಾಡಿದ ಹಣ, ಜನರ ತೆರಿಗೆ ಹಣ ನೀಡುತ್ತಿದ್ದಾರೆ. ಈ ಸಾಲವನ್ನು ಸಿದ್ದರಾಮಯ್ಯ ತೀರಿಸುವುದಿಲ್ಲ, ರಾಜ್ಯದ ಏಳು ಕೋಟಿ ಜನ ತೀರಿಸಬೇಕಾಗುತ್ತದೆ. ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ