

ಕುಣಿಗಲ್: ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ನನಗಿದೆ. ಆರೋಗ್ಯದೃಷ್ಟಿಯಿಂದ ಇದು ಸಾಧ್ಯವೋ ಇಲ್ಲವೋ, ನಿಜವಾಗಿಯೂ ಹೋಗುವ ಪ್ರಯತ್ನ ಮಾಡುವೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತಾಲೂಕಿನ ಹಂಗರನಹಳ್ಳಿ ವಿದ್ಯಾ ಚೌಡೇಶ್ವರಿ ಸನ್ನಿಧಿಗೆ ಬುಧವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಆರೋಗ್ಯ ನೋಡಿಕೊಳ್ಳಬೇಕಾಗಿರುವುದರಿಂದ ಅಯೋಧ್ಯೆ ಹೋಗುವ ಬಗ್ಗೆ ವಿಚಾರ ಮಾಡುತ್ತಿರುವೆ ಎಂದರು.
ಉಪವಾಸ ವ್ರತ: ಹಂಗರಹಳ್ಳಿ ವಿದ್ಯಾಚೌಡೇಶ್ವರಿ ದೇವಸ್ಥಾನಕ್ಕೆ ಶ್ರೀ ಬಾಲ ಮಂಜುನಾಥ ಶ್ರೀಗಳ ಆಹ್ವಾನ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬಂದಿದ್ದು ನಾನು ಉಪವಾಸ ವ್ರತ ಕೈಗೊಂಡು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದೇನೆ. ನನ್ನ ಎರಡು ಮಂಡಿ ಚೆನ್ನಾಗಿಲ್ಲ, ಆದರೂ, ದೀರ್ಘ ದಂಡ ನಮಸ್ಕಾರ ಮಾಡಿದ್ದೇನೆ. ಇಲ್ಲಿ ನಡೆದಂತಹ ಹೋಮ ಅತ್ಯಂತ ವಿಶೇಷವಾಗಿತ್ತು ಎಂದು ಎಚ್ಡಿಡಿ ತಿಳಿಸಿದರು.
ಉತ್ತರಾಯಣ ಪುಣ್ಯಕಾಲದಲ್ಲಿ ದೇವಿಗೆ ಅತ್ಯಂತ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ವರ್ಧಂತಿ ಉತ್ಸವ ಮತ್ತು ಅಮ್ಮನವರ ಚಿಕ್ಕಮ್ಮ ಜಾತ್ರೆಯು ಶಾಸ್ತ್ರೋಕ್ತವಾಗಿ ನಡೆದಿದೆ. ಈ ಸಂದರ್ಭದಲ್ಲಿ ದೇವಿಗೆ ವಜ್ರ ಖಚಿತ ಕಿರೀಟ ಧಾರಣೆ ಮಾಡಿದ್ದು ದೇವಿಯ ಶಕ್ತಿಯಿಂದಾಗಿ ಮೂರು ಬಾರಿ ಪ್ರದಕ್ಷಣೆ ಮಾಡಿರುವುದು ವಿಶೇಷವೆನಿಸಿದೆ. ಕಿರೀಟವನ್ನು ದೇವಸ್ಥಾನದಿಂದಲೇ ಕೊಟ್ಟಿರುವುದಾಗಿ ಸ್ಪಷ್ಟಪಡಿಸಿದರು.
ಕಳೆದ ಅಕ್ಟೋಬರ್‌ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಹರಕೆಯನ್ನು ತೀರಿಸಿದ್ದರು. ನನಗೂ ಈ ಕ್ಷೇತ್ರಕ್ಕೆ ತೆರಳುವಂತೆ ಹೇಳಿದ್ದರು. ಹಾಗಾಗಿ, ತಾಯಿ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದು ಹೋಮದಲ್ಲು ಭಾಗಿಯಾಗಿದ್ದೆ. ಶ್ರೀ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಹೇಳಿಕೆಯನ್ನ ಕೊಡುವುದಿಲ್ಲ ಎಂದರು.
2.30 ಕೋಟಿ ಮೊತ್ತದ ವಜ್ರ ಖಚಿತ ಕಿರೀಟ ವಿದ್ಯಾ ಚೌಡೇಶ್ವರಿ ದೇವಿಗೆ 2.30 ಕೋಟಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಈ ಸಂದರ್ಭದಲ್ಲಿ ಧಾರಣೆ ಮಾಡಲಾಯಿತು. ದೇವಿಗೆ ಮಾಜಿ ಪ್ರಧಾನಿ ದೇವೇಗೌಡರೇ ಧರಿಸಿ ಭಕ್ತಿಯನ್ನು ಮೆರೆದರು. ಈ ವೇಳೆ ಮಾಜಿ ಸಚಿವ ಡಿ.ನಾಗರಾಜಯ್ಯ, ಶ್ರೀ ಬಾಲಮಂಜುನಾಥ ಶ್ರೀಗಳು ಮತ್ತಿತರರು ಇದ್ದರು. ಹರಕೆ ತೀರಿಸಿದ್ದ ಎಚ್ಡಿಕೆ ಕಳೆದ ವರ್ಷ ಅಕ್ಟೋಬರ್ 24 ರಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿದ್ಯಾ ಚೌಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಪೂರ್ಣಾಹುತಿ ಯಾಗದಲ್ಲಿ ಭಾಗಿಯಾಗಿದ್ದರು. ಎಚ್ಡಿಕೆ ಆರೋಗ್ಯ ಸುಧಾರಿಸಲು ದೇವಿ ಸನ್ನಿಧಿಯಲ್ಲಿ ಅಭಿಮಾನಿಗಳ ಹರಕೆ ಕಟ್ಟಿಕೊಂಡಿದ್ದು ಅದನ್ನು ತೀರಿಸಲು ಎಚ್ಡಿಕೆ ಭೇಟಿ ನೀಡಿದ್ದರು.