

ಬೆಂಗಳೂರು: ಬೆಂಗಳೂರಿನಂತಹ ಮಹಾನಗರದಲ್ಲಿ ಇಂದು ಬೆವರು ಸುರಿಸಿ ದುಡಿಯುವವರಿಗಿಂತ ಹವಾನಿಯಂತ್ರಿತ ಕೋಣೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆಯೇ ಜಾಸ್ತಿ. ಇಂತಹವರು ಫಿಟ್‌ನೆಸ್‌ಗಾಗಿ ಯೋಗ, ವ್ಯಾಯಾಮ ಮಾಡಲು ಹೊರಗೆ ಹೋಗುವ ಬದಲು ಮನೆಯಲ್ಲೇ ಆ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಕೋವಿಡ್ ನಂತರ ಮಧ್ಯಮ ವರ್ಗದವರು ಸಹ ಮನೆಯಲ್ಲಿ ಪುಟ್ಟ ಜಿಮ್ ಹೊಂದಲು ಬಯಸುತ್ತಿದ್ದಾರೆ. ಹೀಗಾಗಿ ನಗರಗಳಲ್ಲಿ ಮನೆ ಕಟ್ಟಿಸುವವರು ಜಿಮ್‌ಗಾಗಿಯೇ ಪ್ರತ್ಯೇಕ ಕೊಠಡಿ ಅಥವಾ ಸ್ಥಳಾವಕಾಶದ ಬಗ್ಗೆ ಯೋಜಿಸುತ್ತಿದ್ದಾರೆ. ಪರಿಣಾಮ, ಫ್ಲ್ಯಾಟ್ನಲ್ಲಿ ಮಾತ್ರವಲ್ಲದೆ ಐಷಾರಾಮಿ ವಿಲ್ಲಾಗಳಲ್ಲೂ ಜಿಮ್‌ಗಾಗಿ ಪ್ರತ್ಯೇಕ ಕೊಠಡಿ ಮೀಸಲಿಡಲಾಗುತ್ತಿದೆ.
ಮನೆಯಲ್ಲಿ ಜಿಮ್ ಬಯಸುವವರು ತಳಮಹಡಿ, ಮೇಲ್ಛಾವಣಿ ಇಲ್ಲವೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಕಲ್ಪಿಸುತ್ತಾರೆ. ದಿನದಲ್ಲಿ ಒಂದೆರಡು ಗಂಟೆಗಳ ಕಾಲ ಮಾತ್ರ ಬಳಕೆ ಆಗುವುದರಿಂದ ಆ ಜಾಗ ವ್ಯರ್ಥ ಆಗಬಾರದು ಎಂಬ ಕಾರಣಕ್ಕೆ ವಿನ್ಯಾಸಕಾರರು ಒಂದೇ ಕೊಠಡಿಯನ್ನು ಜಿಮ್, ಹೋಮ್ ಥಿಯೇಟರ್, ಪಾರ್ಟಿ ಹಾಲ್ ಆಗಿಯೂ ರೂಪಿಸುತ್ತಿದ್ದಾರೆ. ಸಾಮಾನ್ಯವಾಗಿ ಇಬ್ಬರು ಜಿಮ್ ಬಳಸಿದರೆ ಅದಕ್ಕೆ 10/10 ಜಾಗ ಸಾಕು. ಅದಕ್ಕಿಂತ ಹೆಚ್ಚು ಮಂದಿ ಇದ್ದರೆ 14/20 ಬೇಕಾಗುತ್ತದೆ. ಆದರೆ ಇದಕ್ಕಿಂತ ಹೆಚ್ಚು ಜಾಗ ಜಿಮ್‌ಗೆ ಮೀಸಲಿಟ್ಟರೆ ಮನೆಯ ಅಂತ ಕುಂದುತ್ತದೆ.
ಮನೆಯಲ್ಲಿ ಜಿಮ್ ನಿರ್ಮಿಸುವವರು ತಮ್ಮ ಆರ್ಥಿಕ ಬಲಕ್ಕೆ ಅನುಗುಣವಾಗಿ ಮುನ್ನಡೆಯಬೇಕು. ಉದಾಹರಣೆಗೆ, ಜಿಮ್ ರೀತಿಯಲ್ಲೇ ವಿನ್ಯಾಸ ಇರಬೇಕು ಎಂದು ಬಯಸುವವರು ಗೋಡೆಗಳಿಗೆ ಕನ್ನಡಿ ಅಳವಡಿಸಬಹುದು. ಸಂಗೀತಕ್ಕಾಗಿ ಮಿನಿ ಸ್ಪೀಕರ್, ತೂಕ ನೋಡುವ ಯಂತ್ರ, ಪ್ಲೋರಿಂಗ್ ಮ್ಯಾಟ್, ಟ್ರೆಡ್‌ಮಿಲ್, ಮರಳಿನ ಕಿಟ್ ಹೀಗೆ ಅಗತ್ಯ ಇರುವ ಕೆಲ ಯಂತ್ರಗಳನ್ನು ಅಳವಡಿಸಿಕೊಳ್ಳಬಹುದು.
ಜಿಮ್ ನಿರ್ಮಿಸುವ ಮುನ್ನ...
* ಮನೆ ಕಟ್ಟಿಸುವವರು ಆರಂಭದಲ್ಲಿ ಉತ್ಸಾಹ ತೋರುತ್ತಾರೆ. ಅದಕ್ಕೆ ಪೂರವಾಗಿ ಒಂದಷ್ಟು ಅಗತ್ಯ ಸಲಕರಣೆಗಳನ್ನೂ ಅಳವಡಿಸಿಕೊಳ್ಳುತ್ತಾರೆ. ಆದರೆ 5-6 ತಿಂಗಳ ನಂತರ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಧೋರಣೆ ಬದಿಗೊತ್ತಿ ನಿರಂತರ ಬದ್ಧತೆ ತೋರಬೇಕು.
* ಮನೆಯಲ್ಲಿ ಜಿಮ್ ನಿರ್ವಹಣೆ ಸುಲಭವಲ್ಲ. ಯಂತ್ರಗಳನ್ನು ಆಗಾಗ್ಗೆ ಸರ್ವೀಸ್ ಮಾಡಿಸಬೇಕು.
* ವರ್ಕ್‌ಔಟ್ ಮಾಡುವಾಗ ತರಬೇತುದಾರರಿದ್ದರೆ ಒಳ್ಳೆಯದು.
* ನೀವೇ ಆಸಕ್ತಿವಹಿಸಿ ಜಿಮ್ ವ್ಯವಸ್ಥೆ ಮಾಡಿ. ಈ ವಿಚಾರದಲ್ಲಿ ಯಾರನ್ನೋ ಅನುಕರಿಸಬೇಡಿ. ಮನೆಯಲ್ಲಿ ಅನಗತ್ಯವಾಗಿ ಜಿಮ್ ನಿರ್ಮಿಸಿ ಸ್ಥಳದ ಜೊತೆಗೆ, ಹಣ ವ್ಯರ್ಥಮಾಡದಿರಿ.