ಹೃದಯ ಕಮಲ ಅರಳಿಸಲು ಗುರುಕಾರುಣ್ಯ ಅಗತ್ಯ;ಶ್ರೀಶೈಲ ಜಗದ್ಗುರುಗಳ ಅಭಿಮತ, ಪಂಚಾಚಾರ್ಯ ಸೇವಾಭೂಷಣ ಪ್ರಶಸ್ತಿ

pancha
Published on

ಬೆಂಗಳೂರು: ಕೆರೆ-ಸರೋವರಗಳಲ್ಲಿರುವ ಕಮಲ ಅರಳಲು ಸೂರ್ಯನ ಕಿರಣಗಳು ಹೇಗೆ ಅವಶ್ಯಕವೋ ಶಿಷ್ಯನ ಹೃದಯ ಕಮಲವನ್ನು ಅರಳಿಸಲು ಗುರುಕಾರಣ್ಯ ಅಗತ್ಯವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದ್ದಾರೆ.

ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸೂರ್ಯನ ಕಿರಣಗಳು ತಾಕದೆ ಹೂವುಗಳು ಅರಳುವುದಿಲ್ಲ. ಗುರು ಕಾರುಣ್ಯವಿಲ್ಲದೆ ಶಿಷ್ಯನ ಹೃದಯ ಅರಳುವುದಿಲ್ಲ. ಪ್ರತಿಯೊಬ್ಬ ಗುರುವು ಮೊದಲು ಶಿಷ್ಯನಾಗಿರುತ್ತಾನೆ. ಉತ್ತಮ ಶಿಷ್ಯನಾದವನು ಉತ್ತಮ ಗುರುವಾಗಲು ಸಾಧ್ಯ. ಅಂತಹ ಗುರುವನ್ನು ಸ್ಮರಿಸಲು ಇರುವ ಪವಿತ್ರ ದಿನವೇ ಗುರುಪೂರ್ಣಿಮೆ. ಗುರುಪೂರ್ಣಿಮೆಯಂದು ಶ್ರೀಪತಿ ಪಂಡಿತಾರಾಧ್ಯರ ಜಯಂತಿಯನ್ನು ಆಚರಿಸಲಾಗುತ್ತದೆ. ಬ್ರಹ್ಮಸೂತ್ರಗಳಿಗೆ ವೀರಶೈವ ಪರವಾದ ವ್ಯಾಖ್ಯಾನ ಬರೆಯುವ ಮೂಲಕ ವೀರಶೈವ ಸಿದ್ಧಾಂತಕ್ಕೆ ವಿದ್ವತ್ ಮನ್ನಣೆಯನ್ನು ತಂದು ಕೊಟ್ಟಿದ್ದರಿಂದ ಸಮಾಜದ ಬಂಧುಗಳು ಗುರುಪೂರ್ಣಿಮೆಯನ್ನು ಶ್ರೀಪತಿ ಪಂಡಿತಾರಾಧ್ಯ ಪೌರ್ಣಿಮೆ ಎಂದು ಆಚರಿಸಬೇಕು ಎಂದು ಜಗದ್ಗುರುಗಳು ವಿವರಿಸಿದರು.

ಸಮಾರಂಭದಲ್ಲಿ 2025ನೇ ಸಾಲಿನ ಜಗದ್ಗುರು ಪಂಚಾಚಾರ್ಯ ಸೇವಾಭೂಷಣ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿಯವರಿಗೆ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಶಿವಗಂಗೆ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭೂತಿಪುರ, ಅಂಬಿಕಾನಗರ, ಚಿಮಣಗೇರಿ, ಕರಿಭಂಟನಾಳ ಮತ್ತಿತರ ಮಠಗಳ ಶ್ರೀಗಳು, ಕೆವಿವಿಎಸ್ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ, ಡಿ.ಎಸ್.ಮ್ಯಾಕ್ಸ್ ದಯಾನಂದ, ವಿದ್ವಾಂಸರಾದ ಡಾ.ಸಿ.ಶಿವಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಗುರು ಪೂರ್ಣಿಮೆ ನಿಮಿತ್ತ ನಡೆದ ಇಷ್ಟಲಿಂಗ ಮಹಾಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಜನಾರ್ಧನ ರಡ್ಡಿ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳ ಪಾದಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net