

ಹನೂರು: ತಾಲೂಕಿನ ಒಡೆಯರಪಾಳ್ಯದಲ್ಲಿ ಬುಧವಾರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ ಹಾಗೂ ಶ್ರೀ ಬಸವೇಶ್ವರ ಪ್ರಸಾದ ನಿಲಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಶ್ರೀಗಳು ಆಗಮಿಸುತ್ತಿದ್ದಂತೆ ಕೊರಮನಕತ್ತರಿ ಬಳಿ ನೆರೆದಿದ್ದ ಭಕ್ತರು ಬೈಕ್ ರ‌್ಯಾಲಿ ಮೂಲಕ ಗ್ರಾಮಕ್ಕೆ ಕರೆತಂದರು. ಪೂರ್ಣಕುಂಭಕಳಸವನ್ನು ಹೊತ್ತ ಹೆಣ್ಣು ಮಕ್ಕಳು, ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಶ್ರೀಗಳನ್ನು ಸ್ವಾಗತಿಸಿದರು. ಮೆರವಣಿಗೆಯ ಮೂಲಕ ಬಸವೇಶ್ವರ ಪ್ರಸಾದ ನಿಲಯಕ್ಕೆ ಕರೆ ತರಲಾಯಿತು. ಈ ವೇಳೆ ಸಾವಿರಾರು ಭಕ್ತರು ಶ್ರೀಗಳಿಗೆ ಜೈಕಾರ ಕೂಗಿದರು. ಯುವಕರು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಬಳಿಕ ಪ್ರಸಾದ ನಿಲಯವನ್ನು ಉದ್ಘಾಟಿಸಲಾಯಿತು. ಒಳಾಂಗಣಕ್ಕೆ ತೆರಳಿದ ಶ್ರೀಗಳು ಪೂಜೆ ನೆರವೇರಿಸಿದರು.
ಬಳಿಕ ಶ್ರೀಗಳು ಗುರುಮಲ್ಲೇಶ್ವರ ದಾಸೋಹ ಮಠವನ್ನು ಉದ್ಘಾಟಿಸಿದರು. ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಾದಪೂಜೆ ನೆರವೇರಿಸಲಾಯಿತು. ಇದೇ ವೇಳೆ ಗಡ್ಡದ ಗೌಡರ ಗದ್ದಿಗೆ ಹಾಗೂ ಗೋಪುರದ ಕಲಶಾರೋಹಣವನ್ನು ನೆರವೇರಿಸಲಾಯಿತು. ಧಾರ್ಮಿಕ ಪೂಜಾ ಕೈಂಕರ್ಯ ನಡೆಯಿತು. ದಾಸೋಹ ಮಠವನ್ನು ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಯನ್ನು ವಿದ್ಯುತ್ ದೀಪದಿಂದ ಸಿಂಗರಿಸಲಾಗಿತ್ತು. ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ದೇಗುಲ ಮಠದ ಮುಮ್ಮಡಿ ಮಹಾಂತ ಸ್ವಾಮೀಜಿ, ಮೈಸೂರು ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಮ.ಬೆಟ್ಟ ಸಾಲೂರು ಮಠದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬಂಡಳ್ಳಿ ಫಲಹಾರ ಪ್ರಭುದೇವ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲೂರು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್, ಮುಖಂಡರಾದ ನಿಶಾಂತ್, ಬಸವರಾಜಪ್ಪ, ವಿನೋದ್‌ಕುಮಾರ್, ಆನಾಪುರ ಉಮೇಶ್ ಇತರರು ಇದ್ದರು.