

ಬೆಂಗಳೂರು: ಗುರುಕುಲ ಶಿಕ್ಷಣದಲ್ಲಿ ವಿದ್ಯೆ, ವಿವೇಕ, ತ್ಯಾಗ ಎಲ್ಲವೂ ಇತ್ತು. ಗುರುಕುಲ ಶಿಕ್ಷಣ ಪದ್ದತಿ ನಮ್ಮ ಸಂಸ್ಕೃತಿಯ ಹೆಗ್ಗುರುತುಗಳಾಗಿದ್ದವು ಎಂದು ಸಂಸ್ಕೃತ ವಿದ್ವಾಂಸರಾದ ಡಾ.ಸನತ್ಕುಮಾರ್ ಮತ್ತೂರು ಹೇಳಿದರು.
ಶ್ರೀನಗರದ ವಿವೇಕಾನಂದ ವಿದ್ಯಾಶಾಲೆಯಲ್ಲಿ ಶ್ರೀಅನುಗ್ರಹ ಸಂಗೀತ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಶ್ರೀಗುರುಪೂರ್ಣಿಮಾರ್ಚನಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಶಿಕ್ಷಣ ವ್ಯಾಪಾರೀಕರಣವಾಗಿದೆ. ವೃತ್ತಿಗಾಗಿ ಶಿಕ್ಷಣ ಕಲಿತರೆ ಅದರಿಂದ ಗುಣ-ನಡವಳಿಕೆ ಸುಧಾರಿಸಲು ಸಾಧ್ಯವಿಲ್ಲ. ವೇದ, ಸಂಸ್ಕೃತವನ್ನು ಕಲಿಯುವ ವ್ಯಕ್ತಿ ಕೆಟ್ಟದಾರಿಯನ್ನು ತುಳಿಯಲು ಸಾಧ್ಯವಿಲ್ಲ. ಪ್ರಾಚೀನ ಗುರುಕುಲ ಪದ್ಧತಿ ದೇಶದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಇಂತಹ ಗುರುಕುಲಗಳನ್ನು ಮುಚ್ಚುವ ಮೂಲಕ ಕಾನ್ವೆಂಟ್ ಶಾಲೆಗಳನ್ನು ತೆರೆದ ಬ್ರಿಟೀಷರು ಸುಮಾರು 200 ವರ್ಷ ಈ ದೇಶವನ್ನು ಆಳಿದರು. 2 ಸಾವಿರ ವರ್ಷವಾಳಿದರೂ ವೇದ, ಸಂಸ್ಕೃತ ಈ ದೇಶದಿಂದ ನಾಶವಾಗಲು ಸಾಧ್ಯವಿಲ್ಲ. ಗುರುವಿಗೆ ಶಿಷ್ಯ ನೀಡುವ ದಕ್ಷಿಣೆ ಮುಖ್ಯವಲ್ಲ. ಗುರು ಶಿಷ್ಯನಿಗೆ ಕಲಿಸುವ ವಿದ್ಯೆ ಬಹಳ ಶ್ರೇಷ್ಠ. ಅಂತಹ ಗುರುಪರಂಪರೆಯನ್ನು ಸ್ಮರಿಸಲು ಗುರುಪೂರ್ಣಿಮೆ ಆಚರಣೆ ಅವಶ್ಯಕ ಎಂದು ಸನತ್ಕುಮಾರ್ ವಿವರಿಸಿದರು.
ಸಮಾರಂಭದಲ್ಲಿ ವಿದ್ವಾನ್ ನಾಗರಾಜ ಶ್ರೌತಿ ಅವರಿಗೆ ‘ಅಧ್ಯಾತ್ಮಾನುಗ್ರಹಶ್ರೀ’ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ವಿ.ಶಂಕರ್, ವಿಜಯವಾಣಿ ಸೀನಿಯರ್ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ, ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ಉಪಾಧ್ಯಕ್ಷೆ ವಿನುತಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಗುರುಪೂರ್ಣಿಮೆ ಪ್ರಯುಕ್ತ ಶಂಕರಾಚಾರ್ಯರ ಪಾದುಕೆ ಪೂಜೆ, ವಿವಿಧ ಸ್ತೋತ್ರ ಮತ್ತು ಅಷ್ಟಕಗಳ ಪಠಣ, ಭಜನ್, ಸಂಗೀತ, ಪ್ರವಚನ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಿತು.
"ಗುರು ಕೇವಲ ಯಾವುದೋ ಒಂದು ಜಾತಿ, ಮತ, ಧರ್ಮಕ್ಕೆ ಸೀಮಿತವಾಗಿಲ್ಲ; ಎಲ್ಲರಿಗೂ ಗುರುವಿನ ಜ್ಞಾನಾಮೃತ ಬೇಕು. ಹೆತ್ತ ತಂದೆ ತಾಯಿಗಳು ಹೇಗೆ ಅವಶ್ಯಕವೋ ಪ್ರತಿಯೊಬ್ಬರ ಬದುಕಿನಲ್ಲಿ ಗುರುವೂ ಅಷ್ಟೇ ಅವಶ್ಯಕ. ಅಂತಹ ಗುರುವನ್ನು ಸ್ಮರಿಸಲು ಗುರುಪೂರ್ಣಿಮೆ ಆಚರಿಸಲಾಗುತ್ತಿದೆ". - ವಿದ್ವಾನ್ ಜೆ.ಎಸ್.ಶ್ರೀಕಂಠ ಭಟ್, ಪ್ರಾಂಶುಪಾಲರು