ಗುರುಗುಂಟಾದಲ್ಲಿ ಹೋರಾಟ ಇಂದಿನಿಂದ

7LNG01
ವೈ.ದುರ್ಗಾಪ್ರಸಾದ
Published on

ಲಿಂಗಸುಗೂರು: ಬಸವಸಾಗರ ಜಲಾಶಯ ಬಲದಂಡೆ ಮತ್ತು ರಾಂಪುರ ಏತನೀರಾವರಿ ನಾಲೆಗಳಿಗೆ ಏ.20ರವರೆಗೆ ವಾರಬಂದಿ ಮೂಲಕ ನೀರು ಹರಿಸುವಂತೆ ರೈತರು ಸಹಾಯಕ ಆಯುಕ್ತರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮಾ.8ರಿಂದ ಗುರುಗುಂಟಾದಲ್ಲಿ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ (ಕೋಡಿಹಳ್ಳಿ ಬಣ)ದ ತಾಲೂಕು ಅಧ್ಯಕ್ಷ ವೈ.ದುರ್ಗಾಪ್ರಸಾದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಬಲದಂಡೆ ಮತ್ತು ರಾಂಪುರ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಮಾಡಿದ್ದು, ಬೆಳೆ ಸಂಪೂರ್ಣವಾಗಿ ಕೈಗೆಟಕಲು ವಾರಬಂದಿಯಂತೆ ಎರಡೂ ನಾಲೆಗಳಿಗೆ ನೀರು ಹರಿಸುವುದು ಅವಶ್ಯಕತೆಯಿದೆ. ಸ್ಥಗಿತಗೊಳಿಸಿದರೆ ಬೆಳೆ ಹಾನಿಗೀಡಾಗಿ ರೈತರು ನಷ್ಟ ಎದುರಿಸುವಂತಾಗಲಿದೆ.

ಹೀಗಾಗಿ ನಾಲೆಗಳಿಗೆ ಏ.1ರಿಂದ 10 ಮತ್ತು ಏ.15ರಿಂದ 20ರವರೆಗೆ ವಾರಬಂದಿ ಮೂಲಕ ನೀರು ಹರಿಸಬೇಕು. ಮಾ.7ರೊಳಗೆ ಲಿಖಿತ ರೂಪದಲ್ಲಿ ಉತ್ತರ ನೀಡಬೇಕೆಂದು ಗಡುವು ನೀಡಲಾಗಿತ್ತು. ಆದರೆ, ತಾಲೂಕು ಆಡಳಿತ ಸ್ಪಂದನೆ ನೀಡದಿರುವ ಕಾರಣ ತಾಲೂಕಿನ ಗುರುಗುಂಟಾದಲ್ಲಿ ರೈತಸಂಘದ ರಾಜ್ಯ ಮತ್ತು ಜಿಲ್ಲಾ ಸಮಿತಿ ಸಹಯೋಗದೊಂದಿಗೆ ಮಾ.8ರಂದು ಅಹೋರಾತ್ರಿ ಪ್ರತಿಭಟನೆ,

ಮಾ.9ರಂದು ಗ್ರಾಮದ ರಂಗ ಮಂಟಪದಿಂದ 500ಕ್ಕೂ ಹೆಚ್ಚು ರೈತರು ಮೇಣದ ಬತ್ತಿಯೊಂದಿಗೆ ಬಸವಣ್ಣ ದೇವಸ್ಥಾನದವರೆಗೆ ಪ್ರತಿಭಟನಾ ಮೆರವಣಿಗೆ, ಮಾ.10ರಂದು ಗ್ರಾಮದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ 100 ಟ್ರಾೃಕ್ಟರ್‌ಗಳ ಬೃಹತ್ ರ‌್ಯಾಲಿ ನಡೆಸಲಾಗುವುದು. ಮಾ.11ರಂದು ಗ್ರಾಮದಲ್ಲಿ ಎನ್‌ಎಚ್ 150ಎ ಹೆದ್ದಾರಿ ಬಂದ್ ಮಾಡಿ ರಸ್ತೆ ಸಂಚಾರ ತಡೆ ನಡೆಸಲಾಗುವುದೆಂದು ತಿಳಿಸಿದರು.

ಪ್ರಮುಖರಾದ ರಾಮಣ್ಣ ಅಡಿಕೇರ, ಬಸಣ್ಣ ಕೋಠಾ, ಹನುಮನಗೌಡ, ಹನುಮಂತ, ಲಾಲಸಾಬ್, ಆದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net