ಹೇಮಾವತಿ ಜಲಾಶಯದಿಂದ ನೀರು ಹರಿಸಿ

Published on

ಕೆ.ಆರ್.ಪೇಟೆ: ಬೆಳೆಗಳ ಸಂರಕ್ಷಣೆಗೆ ಹೇಮಾವತಿ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ವಿಧಾನಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ತಾಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ಭತ್ತ ಮತ್ತು ತೆಂಗು ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು ರೈತರು ಕಾಯುತ್ತಿದ್ದಾರೆ. ಸಕಾಲದಲ್ಲಿ ಹೇಮೆಯ ನೀರು ಬಾರದಿದ್ದರೆ ಬೆಳೆದು ನಿಂತ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂದು ತಿಳಿಸಿದರು.

ಶಾಸಕರ ಮನವಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಉತ್ತರಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಈ ಹಿಂದಿನ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ಹೇಮಾವತಿ ಜಲಾಶಯದಿಂದ 2024ರ ಜುಲೈ 30 ರಿಂದ 2025ರ ಜ.4ರ ರವರೆಗೆ ರಬಿ, ಖಾರಿಫ್, ಭತ್ತದ ಬೆಳೆಗೆ ಈಗಾಗಲೇ ನೀರು ಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಜಲಾಶಯದಲ್ಲಿ 20.66 ಟಿ.ಎಂ.ಸಿ ನೀರಿನ ಸಂಗ್ರಹವಿದೆ. ಸದರಿ ನೀರನ್ನು ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾಯ್ದಿರಿಸಬೇಕಾಗಿರುವುದರಿಂದ ಮುಂದಿನ ಮೇ ತಿಂಗಳ ಅಂತ್ಯದವರೆಗೂ ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಚಿವರ ಉತ್ತರಕ್ಕೆ ತೃಪ್ತರಾಗದ ಶಾಸಕ ಎಚ್.ಟಿ.ಮಂಜು, ಈ ಭಾಗದ ನದಿ, ಅಣೆಕಟ್ಟೆ ನಾಲೆಗಳ ರೈತರು ಯಾವಾಗಲೂ ಎರಡು ಬೆಳೆ ಭತ್ತ ಬೆಳೆಯುತ್ತಿದ್ದಾರೆ. ತಾಲೂಕು ವ್ಯಾಪ್ತಿಯ 15 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿವೆ. ಈ ಬೆಳೆಗಳ ಸಂರಕ್ಷಣೆ ಮಾಡಬೇಕು. ಈ ನಾಲಾ ವ್ಯಾಪ್ತಿಯ ರೈತರು ಭತ್ತದ ಒಟ್ಟಲು ಹಾಕಿ ನಾಟಿ ಮಾಡಲು ನೀರಿಗಾಗಿ ಕಾಯುತ್ತಿದ್ದಾರೆ. ತಕ್ಷಣ ನಾಲೆಗಳಿಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net