

ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಬಣದ ಬಿ.ಆರ್.ಗುರುದೇವ್ ಅವರು ಆಯ್ಕೆಯಾಗಿದ್ದು, ಆರ್.ಟಿ.ದ್ಯಾವೇಗೌಡ ಅವರ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.
ಸೆ.8ರಂದು ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ನಡಾವಳಿ ಪುಸ್ತಕಕ್ಕೆ ಹಾರನಹಳ್ಳಿ ಅಶೋಕ್ ಬಣದ ನಿರ್ದೇಶಕರು ಸಹಿ ಹಾಕದ ಹಿನ್ನೆಲೆಯಲ್ಲಿ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ, ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್, ಖಜಾಂಚಿ ಪಾರ್ಶ್ವನಾಥ್ ಅವರು ವಿಶ್ವಾಸಮತ ಪಡೆಯುವಲ್ಲಿ ವಿಫಲವಾಗಿರುವುದರಿಂದ ಅವರು ತಮ್ಮ ಹುದ್ದೆಗಳಲ್ಲಿ ಮುಂದುವರಿಯುವಂತಿಲ್ಲ. ಹಾಗೆಯೇ ಅವರು ಮಾಡಿದ ಯಾವ ಆದೇಶಗಳನ್ನು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮಾನ್ಯ ಮಾಡುವಂತಿಲ್ಲವೆಂದು ಸಹಕಾರ ಸಂಘಗಳ ಉಪನಿಬಂಧಕರು ಆದೇಶಿಸಿದ್ದಾರೆ. ಆ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಎಂಟಿಇಎಸ್ ಅಧ್ಯಕ್ಷ ಗಾದಿ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದೆ.
ಆರ್‌ಟಿಡಿ ವಿರುದ್ಧ ಮುನಿಸು: 2025 ಜ.10ರಂದು ಎಂಟಿಇಎಸ್ ಅಧ್ಯಕ್ಷರಾಗಿ ಆರ್.ಟಿ.ದ್ಯಾವೇಗೌಡ ಆಯ್ಕೆಯಾಗಿದ್ದರು. ಹಲವು ದಶಕಗಳಿಂದ ಎಂಟಿಇಎಸ್ ಅಧ್ಯಕ್ಷರಾಗಿ ಸಂಸ್ಥೆಯಲ್ಲಿ ಹಿಡಿತ ಸಾಧಿಸಿದ್ದ ಅಶೋಕ್ ಹಾರನಹಳ್ಳಿ ಅವರ ಅಧಿಪತ್ಯ ಮುಗಿದು ಹೊಸ ಶಕೆ ಆರಂಭವಾಯಿತು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಕೇವಲ 9 ತಿಂಗಳಲ್ಲಿ ನಿರೀಕ್ಷೆ ಹುಸಿಯಾಗಿದ್ದು, 24 ನಿರ್ದೇಶಕರಲ್ಲೇ ಒಮ್ಮತ ಮೂಡದೆ ಅವಿಶ್ವಾಸ ನಿರ್ಣಯದ ವರೆಗೆ ಬಂದು ನಿಂತಿತ್ತು. ಮಲೆನಾಡು ತಾಂತ್ರಿಕ ಕಾಲೇಜು ಸಿಬ್ಬಂದಿ ನೇಮಕ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ, ಹಿರಿಯ ನಿರ್ದೇಶಕರಿಗೆ ಗೌರವ ಕೊಡುತ್ತಿಲ್ಲವೆಂಬ ವಿಚಾರ ಮುಂದಿಟ್ಟುಕೊಂಡು ಅಶೋಕ್ ಹಾರನಹಳ್ಳಿ ನೇತೃತ್ವದ 13 ನಿರ್ದೇಶಕರು ಆರ್.ಟಿ.ದ್ಯಾವೇಗೌಡರ ವಿರುದ್ಧ ಮುನಿಸು ತೋರಿದ್ದರು.
ಅಮಾನತಿಗೆ ಆಕ್ರೋಶ: ಸಂಸ್ಥೆಯ ನಿಯಮ ಉಲ್ಲಂಘನೆ ಆರೋಪದಡಿ ನಿರ್ದೇಶಕರಾದ ಡಾ.ಅರವಿಂದ್, ಎಸ್.ಜಿ.ಶ್ರೀಧರ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಆರ್.ಟಿ.ದ್ಯಾವೇಗೌಡ ಸೆ.6ರಂದು ಆದೇಶಿಸಿದ್ದರು. ಆಡಳಿತ ಮಂಡಳಿ ವಿವಾದ ಹಿನ್ನೆಲೆಯಲ್ಲಿ ಸೆ.8ರ ಸೋಮವಾರ ಅವಿಶ್ವಾಸ ನಿರ್ಣಯ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಭೆಗೆ ಅಮಾನತು ಆಗಿರುವ ನಿರ್ದೇಶಕರು ಬರುವ ಆಗಿಲ್ಲವೆಂದು ಅಧ್ಯಕ್ಷರು ಹಾಗೂ ಅವರ ಬಣದ ನಿರ್ದೇಶಕರು ಹೇಳುತ್ತಿದ್ದಂತೆ ಅಶೋಕ್ ಹಾರನಹಳ್ಳಿ ಬಣದ ಉಳಿದ 10 ನಿರ್ದೇಶಕರು ಸಹ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದೆ ನಿರ್ಗಮಿಸಿದ್ದರು. ಅಶೋಕ್ ಹಾರನಹಳ್ಳಿ ಬಣದಲ್ಲಿ ಬಿ.ಆರ್.ಗುರುದೇವ್, ಎಸ್.ಜಿ.ಶ್ರಿಧರ್, ಜಿ.ಟಿ.ಕುಮಾರ್, ಡಾ.ಅರವಿಂದ್, ಕೆ.ಎಂ.ಶಿವಣ್ಣ, ಎಂ.ಎಸ್.ಸುರೇಶ್, ಎಸ್.ಕಾರ್ತಿಕ್, ಅನೂಪ್ ಹಾರನಹಳ್ಳಿ, ಕೆ. ಪ್ರಭಾಕರ್, ಜಿ.ಆರ್.ಶ್ರೀನಿವಾಸ್, ಕೆ.ಎನ್.ಗುರಪ್ಪ ಹಾಗೂ ಅರ್ಜುನ್ ಗುರುದೇವ್ ಇದ್ದರು.
ಸೆ.8ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಾಜರಿದ್ದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಭಿವೃದ್ಧಿ ಅಧಿಕಾರಿ ಎಂ. ಜಗದೀಶ್ ಅವರು ಎರಡೂ ಕಡೆಯ ವರದಿ ಪಡೆದು ತೆರಳಿದ್ದರು. ಬುಧವಾರ ಈ ಸಂಬಂಧ ಆದೇಶ ಹೊರಡಿಸಿದ್ದು, ಬಿ.ಆರ್. ಗುರುದೇವ್ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಜಿ.ಟಿ.ಕುಮಾರ್ ಹಾಗೂ ಎಸ್.ಜಿ. ಶ್ರೀಧರ್ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ. ಆದೇಶ ಹೊರಬೀಳುತ್ತಿದ್ದಂತೆ ನೂತನ ಪದಾಧಿಕಾರಿಗಳು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.