

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ನಾರಾಯಣ ಗುರುಗಳು ಹಿಂದುಳಿದ ಸಮಾಜದ, ಕೆಳ ವರ್ಗದ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡುವುದರ ಮೂಲಕ ಅನುಕಂಪದ ಮೂರ್ತಿಯಾಗಿದ್ದರು. ವಿದ್ಯೆ ಮತ್ತು ಸಂಘಟನೆಯ ಶಕ್ತಿಯನ್ನು ಜಗತ್ತಿಗೆ ಸಾರಿ ಹೇಳಿದವರು. ಆ ಮೂಲಕ ಇಡೀ ಜಗತ್ತಿನಿಂದ ಸ್ವೀಕರಿಸಲ್ಪಟ್ಟ ಮಹಾಗುರುಗಳಾಗಿದ್ದರು. ಆದುದರಿಂದ ನಾವು ವಿದ್ಯೆ ಮತ್ತು ಸಂಘಟನೆಯ ಶಕ್ತಿಯ ಮೂಲಕ ರಾಜಕೀಯ ಶಕ್ತಿಯನ್ನೂ ಕೂಡ ಪಡೆದು ಸಮಾಜದಲ್ಲಿ ಗುರುತಿಸುವಂತಾಗಬೇಕು. ಸಂಕುಚಿತ ಮನೋಭಾವ ಬಿಟ್ಟು ಸ್ವಾಭಿಮಾನದಿಂದ ಮುಂದೆ ಬರಬೇಕು ಎಂದು ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಉಜಿರೆ ಎಸ್.ಕೆ.ಮೆಮೋರಿಯಲ್ ಹಾಲ್‌ನಲ್ಲಿ ಯುವ ವಾಹಿನಿ ಸಂಚಲನಾ ಸಮಿತಿ ಉಜಿರೆ, ಶ್ರೀ ಗುರುನಾರಾಯಣ ಸೇವಾ ಸಂಘ ಉಜಿರೆ ಜಂಟಿ ನೇತೃತ್ವದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ಮಾತನಾಡಿ, ಗುರು ಪೂಜೆಯ ಮೂಲಕ ಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶ ಈಡೇರುತ್ತದೆ. ಜಾತಿ ಸಂಘಟನೆಗಳಿರುವುದು ಇತರ ಜಾತಿಗಳನ್ನು ತುಳಿಯುವುದಕ್ಕಲ್ಲ, ಬದಲಾಗಿ ನಮ್ಮ ಸಮಾಜದ ಅಭಿವೃದ್ಧಿಗಾಗಿ ಎಂದರು.
ಉಜಿರೆ ಗ್ರಾ.ಪಂ.ಉಪಾಧ್ಯಕ್ಷ ರವಿ ಕುಮಾರ್ ಬರಮೇಲು ಪ್ರಾಸ್ತಾವಿಕವಾಗಿ ಮಾತನಾಡಿ, ಉಜಿರೆಯಲ್ಲಿ ಗುರುಮಂದಿರ ನಿರ್ಮಾಣ ಮಾಡುವ ಕನಸಿಗೆ ಎಲ್ಲರ ಸಹಕಾರ ಕೋರಿದರು.
ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಊರ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್, ತಾಲೂಕು ಸಂಘದ ನಿರ್ದೇಶಕಿ ಜಿ.ಪ.ಮಾಜಿ ಸದಸ್ಯೆ ನಮಿತಾ ಕೆ.ಪೂಜಾರಿ, ಯುವ ವಾಹಿನಿ ಉಜಿರೆ ಸಂಚಲನ ಸಮಿತಿ ಅಧ್ಯಕ್ಷ ಕಿಶೋರ್ ಪೆರ್ಲ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ, ಉಜಿರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ ಕಲಾಯಿ, ಉಜಿರೆಯ ಸಿವಿಲ್ ಇಂಜಿನಿಯರ್ ಸೂರ್ಯನಾರಾಯಣ, ಗ್ರಾ.ಪಂ.ಸದಸ್ಯರಾದ ಗುರುಪ್ರಸಾದ್ ಕೋಟ್ಯಾನ್, ಸವಿತಾ, ನಾಗವೇಣಿ ಉಪಸ್ಥಿತರಿದ್ದರು.
ಉಜಿರೆ ಶ್ರೀ ಗುರುನಾರಾಯಣ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಬರಮೇಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಜ್ಞಾ ಓಡಿಲ್ನಾಳ ನಿರೂಪಿಸಿ, ಶಿಕ್ಷಕ ಸುರೇಶ್ ಮಾಚಾರ್ ಸ್ವಾಗತಿಸಿದರು. ಮನೋಜ್ ಕುಂಜರ್ಪ ಸಹಕರಿಸಿದರು. ಕಾರ್ಯಕ್ರಮದ ಮೊದಲು ರಘುನಾಥ ಶಾಂತಿ ನೇತೃತ್ವದಲ್ಲಿ ಗುರು ಪೂಜೆ ನಡೆಯಿತು.