

ಚಿಂತಾಮಣಿ: ಇತಿಹಾಸ ಪ್ರಸಿದ್ಧ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಜು.19ರಿಂದ 21ರ ವರೆಗೆ 3 ದಿನಗಳ ಕಾಲ ಗುರುಪೂಜಾ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ತಾಲೂಕಿನ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದ್ಗುರು ಕೈವಾರ ತಾತಯ್ಯನವರಿಗೆ ಗುರುಪೂಜೆಯ ಅಂಗವಾಗಿ ರಾಷ್ಟ್ರಮಟ್ಟದ ಸಂಗೀತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರೂ ಮತ್ತು ಸಹಸ್ರಾರು ಭಜನಾ ತಂಡಗಳು ನಾದೋಪಾಸನೆಯಲ್ಲಿ ಭಾಗವಹಿಸಲಿದ್ದು, ನಿರಂತರ 72 ಗಂಟೆಗಳ ಸೇವೆ ನಡೆಯಲಿದೆ ಎಂದರು.
ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಜು.19ರಂದು ಬೆಳಗ್ಗೆ 6 ಗಂಟೆಗೆ ಸದ್ಗುರುಗಳನ್ನು ಸಭಾಂಗಣಕ್ಕೆ ಕರೆತಂದು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಧರ್ಮಾಧಿಕಾರಿ ಡಾ.ಎಂ. ಆರ್.ಜಯರಾಮ್ ಅವರ ನೇತೃತ್ವದಲ್ಲಿ ಸಾಮೂಹಿಕ ನಾಮಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ಪಿ.ಜೆ.ಬ್ರಹ್ಮಾಚಾರಿ ತಂಡದವರಿಂದ ಪಿಟೀಲು ಸೋಲೋ, ಅದಿತಿ ಪ್ರಹ್ಲಾದ್, ವಿನಯ್ ಶರ್ವ, ಲಕ್ಷ್ಮೀ ಹೊಸೂರು, ಡಿ.ಆರ್.ರಾಜಪ್ಪ ತಂಡದವರಿಂದ ಗಾಯನ ಹಾಗೂ ಭವ್ಯಾ ಮಂಜುನಾಥ್ ತಂಡದವರಿಂದ ಭರತನಾಟ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜು.20ರಂದು ಚೆನ್ನೈನ ಪದ್ಮಶ್ರೀ ಎ.ಕನ್ಯಾಕುಮಾರಿ ಪಿಟೀಲು, ಸಿ.ಕೆ.ಪತಂಜಲಿ ತಂಡದ ಕೊಳಲು, ಕೇರಳದ ಸೂರ್ಯಗಾಯತ್ರಿ ಗಾಯನ, ಸಿಕ್ಕಿಲ್ ಗುರುಚರಣ್ ತಂಡದವರಿಂದ ಗಾಯನ, ಶ್ರೀ ರುದ್ರಾಕ್ಷ ನಾಟ್ಯಾಲಯ ಬೆಂಗಳೂರು ಅವರಿಂದ ಭರತನಾಟ್ಯ ಕಾರ್ಯಕ್ರಮ, ಚೆನ್ನೈನ ಕೆ.ವಿ.ಪ್ರಸಾದ್, ಬಿ.ಹರಿಕುಮಾರ್, ಬೆಂಗಳೂರು ಪ್ರವೀಣ್ ಅವರ ಮೃದಂಗ ವಾದನವಿರುತ್ತದೆ. ಡಾ.ಎ.ವಿಜಯ್ ಕಾರ್ತಿಕೇಯನ್, ವಿ.ಪ್ರಕಾಶ್ ಇಳಯರಾಜ, ಪಿ.ಎಂ.ರಂಜಿತ್ ವಿನಾಯಕ್, ಬಿ.ಮುತ್ತುಕುಮಾರ್, ಮಲೈ ಎಂ.ಕಾರ್ತಿಕೇಯನ್, ಜಿ.ವಿನೋದ್ ಕುಮಾರ್, ಟಿ.ಜಿ.ಗೋವಿಂದರಾಜು, ಟಿ.ಜಿ.ಮುತ್ತುಕುಮಾರ್ ಅವರಿಂದ ವಿಶೇಷ ನಾದಸ್ವರ, ತವಿಲ್ ವಾದನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜು.21 ಗುರುಪೂರ್ಣಿಮ ದಿನ ವಿಶೇಷ ಗುರುಪೂಜೆ, ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ಅಂದು ಬ್ರಹ್ಮಾಂಡಪುರಿ ಶತಕ ಯೋಗದೃಷ್ಟಿ, ರಾಮ ರಾಮ ಮುಕುಂದ ಮಾಧವ ಯೋಗದೃಷ್ಟಿ ಎಂಬ ಎರಡು ಪುಸ್ತಕಗಳ ಬಿಡುಗಡೆ ನಡೆಯಲಿದೆ. ಪ್ರಸಿದ್ಧ ಮೃದಂಗ ವಿದ್ವಾಂಸ ವಿ.ಪ್ರವೀಣ್ ಹಾಗೂ ಭಜನಾ ವಿದ್ವಾಂಸ ಕೆ.ರಾಜಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದರು.