ಗುರು ಸ್ಮರಣೆಯ ಸಂಸ್ಕೃತಿ ಮಾದರಿ

Guru memory, culture, model,
Published on

ದಾವಣಗೆರೆ: ಬೆಳಗ್ಗೆಯಿಂದಲೇ ಜಿಟಿ ಜಿಟಿ ಸುರಿಯುವ ಮಳೆಯಲ್ಲಿ ಪ್ರಯಾಣ ಕಿರಿಕಿರಿಯೇ ಸರಿ. ಆದರೂ ವಿದ್ಯಾರ್ಥಿಗಳ ಪ್ರೀತಿ, ಅಭಿಮಾನ ಎಲ್ಲರನ್ನೂ ಅಲ್ಲಿಗೆ ಕರೆದೊಯ್ಯಿತು.

ನಗರದ ಪಿ.ಬಿ. ರಸ್ತೆಯ ಡಿ.ಆರ್.ಆರ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ 2008-09ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಹಾಗೂ ಹೃದಯಸ್ಪರ್ಶಿಯಾಗಿತ್ತು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಳೆದ ದಿನಗಳ ನೆನಪುಗಳು ಗರಿಗೆದರಿದವು.

ವಿದ್ಯಾರ್ಥಿಗಳು ತಮ್ಮ ವಿದ್ಯಾ ಗುರುಗಳನ್ನು ಪ್ರೀತಿಯಿಂದ ಆಹ್ವಾನಿಸಿ ಕಲಿಸಿ ಕೊಟ್ಟ ವಿದ್ಯೆ ಸ್ಮರಿಸುವ ಮೂಲಕ ಗುರು ವಂದನೆ ಸಲ್ಲಿಸಿದರು. ಗುರುಗಳ ಪಾಠ, ಆಟೋಟಗಳ ಮೆಲುಕು ಹಾಕಿದರು.

ಪಠ್ಯದ ಜತೆ ಗುರುಗಳು ಕಲಿಸಿದ ಜೀವನ ಪಾಠ, ಸಂಸ್ಕೃತಿ, ಸಂಸ್ಕಾರ, ಮೌಲ್ಯ, ಪ್ರತಿಭೆಗೆ ನೀಡಿದ ಮನ್ನಣೆ, ಪ್ರೇರಣೆ ಮೊದಲಾದವುಗಳ ನೆನೆದು ಗದ್ಗದಿತರಾದರು. ತಮ್ಮ ನೆಚ್ಚಿನ ಗುರುಗಳನ್ನು ಸನ್ಮಾನಿಸಿ ಗುರು ಕಾಣಿಕೆ ನೀಡಿ ಸಂಭ್ರಮಿಸಿದರು.

ಈ ವೇಳೆ ಗುರು ವೃಂದದ ಪರವಾಗಿ ಹಾಲೇಶ್ ಹಂಚಿನಮನೆ ನಲ್ಕುದುರೆ, ತಿಪ್ಪೇಸ್ವಾಮಿ, ಗಂಗಾಧರ ಬಿ.ಎಲ್. ನಿಟ್ಟೂರ್, ಮಂಜುನಾಥ್, ನಾಗರಾಜಪ್ಪ, ಹೇಮಾವತಿ ಸಾವಳಗಿ, ಸುರೇಶ್ ಪಿ. ಮುರುಗಿ ಮಾತನಾಡಿ ವಿದ್ಯಾರ್ಥಿಗಳ ಗುರು ಸ್ಮರಣೆಯ ಈ ಸಂಸ್ಕೃತಿ ಮಾದರಿ ಎಂದು ಶ್ಲಾಘಿಸಿ ಶುಭ ಹಾರೈಸಿದರು.

ಶಿಕ್ಷಕರಾದ ಭೋಜರಾಜ್ ಯಾದವ್, ಟಿ ಮಹೇಶನ್, ಶಿಕ್ಷಕಿಯರಾದ ಸರಸ್ವತಿ, ಮಹಾಲಕ್ಷ್ಮೀ, ಸುಚಿತ್ರಾ ಇತರರು ಇದ್ದರು.

ವಿದ್ಯಾರ್ಥಿಗಳಾದ ಅನಿತಾ, ಆಶಾ, ಸೌಮ್ಯ, ಗೀತ, ಶ್ರುತಿ, ಶ್ರೀಧರ್, ಗಿರೀಶ್ ಭಟ್, ಮಣಿಕಂಠ, ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net