

ತುಮಕೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಅವುಗಳ ಉಪಯುಕ್ತತತೆ ಕುರಿತು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ದ್ವಂದ್ವ ನಿಲುವು ವ್ಯಕ್ತವಾಗಿದೆ ಎಂದು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್ಗೌಡ ಹರಿಹಾಯ್ದರು.
ಶ್ರೀಮಂತರಿಗೆ ಈ ಯೋಜನೆಗಳ ಅಗತ್ಯವಿಲ್ಲ. ಹಾಗಾಗಿ, ಫಲಾನುಭವಿಗಳ ಪಟ್ಟಿಯನ್ನು ಅವರ ಆದಾಯಕ್ಕೆ ಅನುಸಾರವಾಗಿ ಪರಿಷ್ಕರಿಸಿದರೆ ಅಭಿವೃದ್ಧಿಗೆ 10,000 ಕೋಟಿ ರೂಪಾಯಿಗಳು ಉಳಿಯುತ್ತವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಹಾರ ಸಚಿವ ಕೆ.ಎಚ್.ಮುನಿಯರಪ್ಪ ಮತ್ತಿತರರು ಬಹಿರಂಗವಾಗಿಯೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಈ ಸರ್ಕಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಲಭ್ಯವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳ ಮೇಲೆ ಆಗುವ ದುಷ್ಪರಿಣಾಮ ಕುರಿತು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕರು ಅಭಿಪ್ರಾಯವ್ಯಕ್ತಪಡಿಸಿದರೂ 15 ಸಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಈಗಲು ಅವರು ತಮ್ಮ ಪಕ್ಷದ ಹಿರಿಯ ಸಚಿವರ ಅಭಿಪ್ರಾಯಗಳಿಗೂ ಕಿವಿಗೊಡುತ್ತಿಲ್ಲ ಎಂಬುದನ್ನು ನೋಡಿದರೆ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಡುವುದನ್ನು ಅವರು ಕಣ್ಣಾರೆ ಕಾಣಲು ನಿರ್ಧರಿಸಿದಂತೆ ಇದೆ ಎಂದು ಸುರೇಶ್ ಗೌಡ ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.