ಗುಂಡ್ಲುಕೊತ್ತೂರು ಕೆರೆ ಪುನಶ್ಚೇತನ ಕಾರ್ಯಕ್ಕೆ ಚಾಲನೆ

WEB4
Published on

ಗೌರಿಬಿದನೂರು ಸೇವಾ ಪ್ರತಿಷ್ಠಾನದಿಂದ ಕಾಯಕಲ್ಪ ಇದುವರೆಗೆ 178 ಕೆರೆಗಳ ಪುನರುಜ್ಜೀವನ

ಗೌರಿಬಿದನೂರು: ಗೌರಿಬಿದನೂರು ಸೇವಾ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಗುಂಡ್ಲುಕೊತ್ತೂರು ಕೆರೆ ಪುನಶ್ಚೇತನ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಮ.ವೇಣುಗೋಪಾಲ್ ಮಾತನಾಡಿ, ಪ್ರತಿಷ್ಠಾನದ ವತಿಯಿಂದ ಈವರೆಗೆ ತಾಲೂಕಿನ ವಿವಿಧ ಗ್ರಾಮಗಳ 9 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು 10ನೇ ಕೆರೆಯಾಗಿದೆ. ತಾಲೂಕಿನಲ್ಲಿ 178 ಕೆರೆಗಳನ್ನೂ ಪುನರುಜ್ಜೀವನಗೊಳಿಸುವ ಆಶಯವನ್ನು ಪ್ರತಿಷ್ಠಾನ ಹೊಂದಿದೆ. ಈ ನಿಟ್ಟಿನಲ್ಲಿ

2020ರಿಂದ ಪ್ರತಿಷ್ಠಾನ ಕಾರ್ಯೋನ್ಮುಖವಾಗಿದೆ. ಗ್ರಾಮಸ್ಥರ ಕೋರಿಕೆ ಮೇರೆಗೆ 2-3 ಕೆರೆಗಳನ್ನು ಆಯ್ದುಕೊಂಡು ಸಮಾಜ ಬಾಂಧವರ ನೆರವಿನಿಂದ ಕೆರೆಗಳಿಗೆ ಕಾಯಕಲ್ಪ ನೀಡುವ ಪ್ರಯತ್ನ ನಡೆಯುತ್ತಿದೆ ಎಂದರು.

ಉತ್ತರ ಪಿನಾಕಿನಿ, ಕುಮುದ್ವತಿ ನದಿ ಸೇರಿ ಹಲವಾರು ಝರಿ-ತೊರೆ, ಕಲ್ಯಾಣಿ ಮತ್ತು ಕೆರೆಗಳಿಂದ ಸಂಪದ್ಭರಿತವಾಗಿದ್ದ ಗೌರಿಬಿದನೂರು ತಾಲೂಕು ಇಂದು ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ತಾಲೂಕು ತನ್ನ ಮೂಲ ಪ್ರಾಕೃತಿಕ ಸೆಲೆಯನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ಊರಿನಲ್ಲೂ ಕೆರೆಯನ್ನು ಉಳಿಸಿಕೊಳ್ಳುವ ಬಗ್ಗೆ ಅಭಿಮಾನ ಮೂಡಬೇಕಿದೆ. ಕೆರೆಯು ತಾಯಿ ಗಂಗೆಯ ಗರ್ಭಗುಡಿಯಾಗಿದೆ. ಅದು ಶುಚಿಯಾಗಿದ್ದರೆ ಮಾತ್ರ ಗಂಗೆಯು ಅಲ್ಲಿ ಪ್ರವಹಿಸುತ್ತಾಳೆ. ಶೋಭಾಯಮಾನವಾಗಿ ನೆಲೆ ನಿಲ್ಲುತ್ತಾಳೆ ಎಂದು ವೇಣುಗೋಪಾಲ್ ಹೇಳಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಕೆ.ವಿ.ಮಂಜುನಾಥ್ ಮಾತನಾಡಿ, ಈವರೆಗೆ ನಿರ್ವಹಿಸಿದ 9 ಕೆರೆಗಳ ಒಟ್ಟು 350 ಎಕರೆ ಪ್ರದೇಶದಲ್ಲಿ ಹೂಳು ಎತ್ತಿ ರೈತರ ಹೊಲ ಗದ್ದೆಗಳಿಗೆ 17400 ಟ್ರ್ಯಾಕ್ಟರ್ ಹಾಗೂ 14450 ಟಿಪ್ಪರ್ ಲಾರಿಗಳಷ್ಟು ಮಣ್ಣನ್ನು ಸಾಗಿಸಲಾಗಿದೆ. ಇದರಿಂದ ರೈತರ ಜಮೀನುಗಳಿಗೆ ಗುಣಮಟ್ಟದ ಮಣ್ಣು ದೊರೆಯುವ ಜತೆಗೆ ಕೆರೆ ಅಂಗಳದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲು ಸಾಧ್ಯವಾಗಿದೆ. ಕೆರೆಗಳ ಪುನಶ್ಚೇತನದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ನಿರ್ಜೀವವಗೊಂಡ ಕೊಳವೆಬಾವಿಗಳು ಮರುಜೀವ ಪಡೆದಿವೆ. 2 ಸಾವಿರ ಅಡಿ ಆಳದಲ್ಲಿದ್ದ ಅಂತರ್ಜಲ ಮಟ್ಟ ಇಂದು 500-600 ಅಡಿಯಲ್ಲಿದೆ. ಜಮೀನುಗಳಲ್ಲಿ ಇಳುವರಿ ಪ್ರಮಾಣವೂ ಹೆಚ್ಚಿದೆ. ಒಂದೇ ಬೆಳೆಯನ್ನು ನಂಬಿಕೊಂಡಿದ್ದ ರೈತರು ಇಂದು ವಿವಿಧ ಬೆಳೆಗಳನ್ನೂ ಬೆಳೆಯಲು ಸಾಧ್ಯವಾಗಿದೆ ಎಂದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಸಂಜೀವರೆಡ್ಡಿ, ಮನಮೋಹನ್, ದಯಾನಂದ್, ನರಸಿಂಹರೆಡ್ಡಿ, ಶಿವಾರೆಡ್ಡಿ, ಆನಂದರೆಡ್ಡಿ, ಮಂಜುನಾಥ್ ರಾಮ್, ದತ್ತಾತ್ರೇಯ, ರಾಜೇಂದ್ರ ಮುಂತಾದವರು ಭಾಗವಹಿಸಿದ್ದರು.

"ಹಿರಿಯ ಕೆಎಎಸ್ ಅಧಿಕಾರಿ ವರಪ್ರಸಾದ್ ರೆಡ್ಡಿ ಮಾರ್ಗದರ್ಶನದಲ್ಲಿ ಗೌರಿಬಿದನೂರು ಸೇವಾ ಪ್ರತಿಷ್ಠಾನ ತಾಲೂಕಿನ ಕೆರೆಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತಿದೆ. ನಮ್ಮ ಊರಿನ ಕೆರೆಯನ್ನೂ ಪುನಶ್ಚೇತನಗೊಳಿಸಿ ಎಂದ ತಕ್ಷಣ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದಕ್ಕೆ ಕಾರಣರಾದ ಎಲ್ಲರಿಗೂ ಅಭಾರಿಯಾಗಿದ್ದೆನೆ." - ಆನಂದರೆಡ್ಡಿ ಗುಂಡ್ಲುಕೊತ್ತೂರು "ಕೆರೆ ತುಂಬಿ ದಶಕಗಳೇ ಕಳೆದಿದ್ದವು. ಎಷ್ಟೇ ಮಳೆಯಾದರೂ ಕೆರೆಯ ಸಂಗ್ರಹ ಸಾಮರ್ಥ್ಯಕ್ಕೆ ತಕ್ಕಂತೆ ನೀರು ಸಂಗ್ರಹವಾಗುತ್ತಿರಲಿಲ್ಲ. 2020ರಲ್ಲಿ ನಮ್ಮ ಊರಿನ ಕೆರೆಯನ್ನು ಪ್ರತಿಷ್ಠಾನದ ವತಿಯಿಂದ ಪುನಶ್ಚೇತನಗೊಳಿಸಲಾಯಿತು. ಬಳಿಕ ಕೆರೆ ಮೂರು ಬಾರಿ ತುಂಬಿ ಕೋಡಿ ಹರಿದಿದೆ. ಅನೇಕ ಕೊಳವೆಬಾವಿಗಳೂ ಮರುಜೀವ ಪಡೆದಿವೆ." - ಕೊಂಡರೆಡ್ಡಿ ಚೋಳಶೆಟ್ಟಿಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net