ಕ್ರೆಡಿಟ್ ಪಾಲಿಟಿಕ್ಸ್ ಕುಲುಮೆಯಲ್ಲಿ ಗುಲ್ಬರ್ಗ ರೈಲ್ವೆ ವಿಭಾಗ ಹೋಯ್ದಾಟ

railway
Published on

ಸಂಸದ ಡಾ.ಜಾಧವ ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಅವರಿಂದ ನಡೆಯದ ಗಂಭೀರ ಪ್ರಯತ್ನ | ಧೂಳಿನಲ್ಲಿ ಉಸಿರುಗಟ್ಟಿಸಿಕೊಳ್ಳುತ್ತಿರುವ ಕಡತ

#* ಬಾಬುರಾವ ಯಡ್ರಾಮಿ ಕಲಬುರಗಿ
ದಶಕಗಳ ಕನಸಾಗಿರುವ ಗುಲ್ಬರ್ಗ ರೈಲ್ವೆ ವಿಭಾಗ ಕ್ರೆಡಿಟ್ ಪಾಲಿಟಿಕ್ಸ್ಗೆ ಬಲಿಯಾಗಿದೆ. ಹೀಗಾಗಿ ಪಿಂಕ್ ಪೇಪರ್ ಸೇರಿದ್ದ ಮಹತ್ವದ ಯೋಜನೆಯೊಂದು ಕಡತದ ಧೂಳಿನಿಂದ ಹೊರಬರಲಾಗದೆ ಉಸಿರುಗಟ್ಟಿಸಿಕೊಂಡಿದೆ. ರಾಜ್ಯದ ಕೇಂದ್ರ ಸಚಿವರೊಬ್ಬರ ಅಡ್ಡಗಾಲಿನಿಂದಾಗಿ ಐಸಿಯುನಿಂದ ಹೊರಬರದೆ ಒದ್ದಾಡುತ್ತಿದೆ.
ತೊಗರಿ ಕಣಜ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಆರಂಭಿಸಿದರೆ ಅದರ ಕ್ರೆಡಿಟ್ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೋಗುತ್ತದೆ ಎಂಬುದು ಬಿಜೆಪಿ ಕೇಂದ್ರ ನಾಯಕರ ಅಭಿಮತ. ವಿಭಾಗದ ಮಾಡದಿದ್ದರೆ ಪಕ್ಷ ಮತ್ತು ಕಲಬುರಗಿ ಸಂಸದರಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ಅಳಕು ಸಹ ಇದೆ. ಇನ್ನು ಕಾಂಗ್ರೆಸ್‌ನವರು ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನವೂ ಮಾಡುತ್ತಿಲ್ಲ. ಹಿಂದೆ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರೇ ಅಡಿಗಲ್ಲು ಹಾಕಿದ್ದರೂ ಹಾಲಿ ರೈಲ್ವೆ ಸಚಿವರ ಮೇಲೆ ಒತ್ತಡ ಹೇರಿ ಮಂಜೂರಿ ಕೊಡಿಸುವ ನಿಟ್ಟಿನಲ್ಲಿ ಗಟ್ಟಿ ಹೆಜ್ಜೆ ಇಡುತ್ತಿಲ್ಲ. ಹೀಗಾಗಿ ರೈಲ್ವೆ ವಿಭಾಗ ಸದ್ಯದ ಸ್ಥಿತಿಯಲ್ಲಿ ಯಾರಿಗೂ ಬೇಡವಾದ ಕೂಸು ಎನ್ನುವಂತಾಗಿದೆ ಎಂಬುದು ಹೋರಾಟಗಾರರ ಆಕ್ರೋಶ.
ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಆಗಲ್ಲ ಅಥವಾ ರದ್ದಾಗಿದೆ ಎನ್ನುವಂತಿಯೂ ಇಲ್ಲ, ಬರುತ್ತದೆ ಎಂಬAತೆಯೂ ಇಲ್ಲ. ಬಿಜೆಪಿ ಸಚಿವರು, ಸಂಸದರು ಸೇರಿ ಎಲ್ಲರೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ ಹೊರತು, ಹಿಂದುಳಿದ ಭಾಗದ ಬಗ್ಗೆ ಕಾಳಜಿ ತೋರಿಸಿ ಕೆಲಸ ಆರಂಭಿಸುವ ಮನಸ್ಸು ಮಾತ್ರ ಮಾಡುತ್ತಿಲ್ಲ.
ರೈಲ್ವೆ ವಿಭಾಗ ಸ್ಥಾಪಿಸಲು ರಾಜ್ಯ ಸರ್ಕಾರ ಅಗತ್ಯವಿರುವ ಜಾಗವನ್ನು ನಗರದ ಐವಾನ್-ಇ-ಶಾಹಿ ಪ್ರದೇಶದ ರಾಜಾಪುರ ರಸ್ತೆಯಲ್ಲಿ ನೀಡಿದೆ. ಆ ಜಾಗ ಈಗಾಗಲೇ ರೈಲ್ವೆ ಇಲಾಖೆ ಹೆಸರಿಗೆ ವರ್ಗಾವಣೆಯಾಗಿದೆ. ಅಲ್ಲದೆ ಹಿಂದೆ ಯುಪಿಎ ಸರ್ಕಾರದಲ್ಲಿ ೧೦ ಕೋಟಿ ರೂ. ಬಿಡುಗಡೆಯಾಗಿ ಅಡಿಗಲ್ಲು ಸಹ ಹಾಕಲಾಗಿತ್ತು. ಆ ನಂತರ ಯಾವುದೇ ಬೆಳವಣಿಗೆ ಕಂಡಿಲ್ಲ. ಕಡತ ಶೀತಲಪೆಟ್ಟಿಗೆ ಸೇರಿ ಹೋಗಿದೆ.
ರೈಲ್ವೆ ವಿಭಾಗಕ್ಕೆ ಪೂರ್ಣ ಮಂಜೂರಾತಿ ನೀಡಿ ಕೆಲಸ ಶುರು ಮಾಡಬೇಕು ಎಂಬ ಹೊತ್ತಿನಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಹಿನ್ನೆಲೆಯಲ್ಲಿ ರಾಜ್ಯದ ಕೇಂದ್ರ ಸಚಿವರೊಬ್ಬರ ಅಡ್ಡಗಾಲು ಹಾಕುವ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾದರು. ಹೀಗಾಗಿ ಅಂದಿನಿAದ ರೈಲ್ವೆ ವಿಭಾಗದ ಕಡತ ದಿನದಿಂದ ದಿನಕ್ಕೆ  ಧೂಳಿನ ಆಳಕ್ಕೆ ಹೋಗುತ್ತಿದೆ ಹೊರತು, ಮೇಲೆದ್ದು ರಾಜ್ಯಕ್ಕೆ ಅನುವು ಮಾಡಿಕೊಡಬೇಕೆಂಬ ಮನಸ್ಸು ಮಾತ್ರ ರಾಜ್ಯದ ೨೫ ಬಿಜೆಪಿ ಸಂಸದರು ಮಾಡದಿರುವುದು ಸೋಜಿಗ. ಇದರೊಂದಿಗೆ ಕಲ್ಯಾಣ ಕರ್ನಾಟಕ ಜನರ ಸಹನೆ ಪರೀಕ್ಷೆ ಮಾಡಿಸಿದಂತಾಗುತ್ತಿದೆ.
ಸAಸದ ಡಾ.ಉಮೇಶ ಜಾಧವ್ ಪದೇಪದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮೇಲೆ ಹಲವಾರು ಸಲ ಒತ್ತಡ ಹೇರಿ ಏನಾದರೂ ಮಾಡಿಸಲು ಪ್ರಯತ್ನಿಸಿದಾಗೊಮ್ಮೆ ಕೇಂದ್ರ ಸಚಿವರು ಇಲ್ಲದ ಕಾರಣ ನೀಡಿ ಅನುಷ್ಠಾನಗೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ. ಅಂತಲೇ ಈ ಭಾಗದ ಜನರ ದಶಕಗಳ ಕನಸಾಗಿರುವ ಗುಲ್ಬರ್ಗ ರೈಲ್ವೆ ವಿಭಾಗಕ್ಕೆ ಖಗ್ರಾಸ ಗ್ರಹಣ ಹಿಡಿದಿರುವಂತಿದೆ. ಯಾವಾಗ ಮೋಕ್ಷ ಸಿಗಲಿದೆಯೋ ಕಾದು ನೋಡಬೇಕು.


ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲು, ರೈಲ್ವೆ ವಿಭಾಗ ಸ್ಥಾಪನೆ ಸೇರಿ ಹಲವು ಬೇಡಿಕೆಗಳನ್ನು ಮುಂದಿರಿಸಿಕೊAಡು ಚೇಂಬರ್ ನಿಯೋಗವೊಂದು ರೈಲ್ವೆ ಸಚಿವರನ್ನು ಭೇಟಿಯಾಗಿ ಒತ್ತಾಯಿಸಿದೆ. ಸಂಸದ ಡಾ.ಉಮೇಶ ಜಾಧವ್ ಸಹ ನಮ್ಮ ಜತೆಗಿದ್ದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
| ಶಶಿಕಾಂತ ಪಾಟೀಲ್
ಕೆಕೆಸಿಸಿಐ ಅಧ್ಯಕ್ಷ
---
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದಾಗ ಕಲಬುರಗಿ ರೈಲ್ವೆ ವಿಭಾಗದ ಸ್ಥಾಪನೆ ಕೆಲಸ ಆರಂಭಿಸುವAತೆ ಒತ್ತಾಯಿಸಿz್ದೆÃವೆ. ಆಗ ಅವರು ರೈಲ್ವೆ ವಿಭಾಗ ಸಾಧ್ಯವಿಲ್ಲ ಅಥವಾ ಮಾಡುವುದಾಗಿ ಸ್ಪಷ್ಟವಾಗಿ ಹೇಳಲಿಲ್ಲ. ಜನರ ಬೇಡಿಕೆ ಇದೆ ಎಂಬುದು ನನ್ನ ಗಮನದಲ್ಲಿದೆ. ಮುಂದಿನ ದಿನಗಳಲ್ಲಿ ಪರಿಶೀಲಿಸಿ ಮಾಡೋಣ ಎಂದಿದ್ದಾರೆ. ಹೀಗಾಗಿ ವಿಳಂಬವಾದರೂ ಆಗಬಹುದು ಎಂಬ ಆಶಾಭಾವವಿದೆ.
| ಸುನೀಲ್ ಕುಲಕರ್ಣಿ
ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net