

*ಗುಲಬರ್ಗಾ ವಿ.ವಿ. 42ನೇ ಘಟಿಕೋತ್ಸವ:* ಏಕ್ ಪೇಡ್ ಮಾ ಕೇ ನಾಮ್ ಅಭಿಯಾನ ಆಯೋಜಿಸಿ
ಕಲಬುರಗಿ : ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆದು 2047ಕ್ಕೆ ಶತಮಾನೋತ್ಸವ ಅಚರಿಸಲಿದ್ದು, ಈ ಹೊತ್ತಿಗೆ ದೇಶ ಸಾಕ್ಷರತೆ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಅವರು ಕರೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಜರುಗಿದ ವಿ.ವಿ.ಯ 42ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ಪುರುಷರು ಶೇ. 75ರಷ್ಟು ಸಾಕ್ಷರತೆ ಹೊಂದಿದ್ದರೆ, ಮಹಿಳೆಯರಲ್ಲಿ ಇದರ ಪ್ರಮಾಣ ಇನ್ನು ಕಡಿಮೆ ಇದೆ. ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯವಿದ್ದು, ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ನಳಂದಾ, ತಕ್ಷಶಿಲಾದಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಇತಿಹಾಸ ನಾವು ಹೊಂದಿದ್ದೇವೆ. ಹಿಂದೆ ದೇಶವನ್ನು ಸೋನೆ ಕೀ ಚಿಡಿಯಾ ಎಂದು ಕರೆಯಲಾಗಿತ್ತು. ಇದೀಗ ಮತ್ತೆ ಭಾರತವನ್ನು ವಿಶ್ವಗುರು ಮಾಡಬೇಕಿದೆ. ಸಮಾನತೆ, ನ್ಯಾಯಕ್ಕಾಗಿ ಗುಲಬರ್ಗಾ ವಿ.ವಿ. ಶ್ರಮಿಸುತ್ತಿದೆ. ವಸುದೈ ಕುಟುಂಬಕ್ಕಂ ಪರಿಕಲ್ಪನೆ ನಮ್ಮದಾಗಿದ್ದು, ಸರ್ವಜನರು ಸುಖದಿಂದ ಬಾಳುವಂತೆ ಮತ್ತು ಜನರು ನಿರೋಗಿಯಾಗಿ ಬದುಕುವ ನಮ್ಮ ಚಿಂತನೆ ಎಲ್ಲೆಡೆ ಪಸರಿಸಬೇಕಿದೆ ಎಂದರು.
ವಿಶ್ವದ ಅರ್ಥಿಕ ಪ್ರಗತಿಯಲ್ಲಿ ಭಾರತವು 5ನೇ ಸ್ಥಾನದಲ್ಲಿದ್ದು, ಇದನ್ನು ಮೂರನೇ ಸ್ಥಾನಕ್ಕೆ ತರಲು ಪ್ರಧಾನಮಂತ್ರಿಗಳು ಪಣ ತೊಟ್ಟಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಇದು ಸಾಧ್ಯವಾದಲ್ಲಿ ಮಾತ್ರ ದೇಶ ವಿಕಸಿತ್ ಭಾರತವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
*ಏಕ್ ಪೇಡ್ ಮಾ ಕೇ ನಾಮ್ ಅಭಿಯಾನ ಆಯೋಜಿಸಿ:*
ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಏಕ್ ಪೇಡ್ ಮಾ ಕೇ ನಾಮ್ ಹೆಸರಿನಡಿ ಗಿಡ ನೆಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದು, ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿ.ವಿ. ಗಳು ಮುಂದಿನ ವಾರದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಗಿಡ ನೆಡಬೇಕು. ತಾಯಿ ಮಕ್ಕಳನ್ನು ರಕ್ಷಿಸುವ ರೀತಿಯಲ್ಲಿ ಗಿಡಗಳನ್ನು ಸಂರಕ್ಷಿಸಬೇಕು ಎಂದು ವಿ.ವಿ.ಗಳಿಗೆ ಸಲಹೆ ನೀಡಿದರು.
*ಇಷ್ಟದ ವೃತ್ತಿಯಲ್ಲಿ ಉತ್ಸಾಹದಿಂದ ಮುನ್ನುಗ್ಗಿ, ಸಾಧನೆ ಶಿಖರವೇರುವಿರಿ*
ಮೊದಲು ಓಟವನ್ನು ತಪ್ಪಿಸಿ. ಇತರರಿಗೆ ಕೆಲಸ ಮಾಡುವುದನ್ನು ಬಿಡಿ. ಪರರಿಗೆ ಜೀವಿಸುವುದನ್ನು ಬಿಟ್ಟು ನಿಮ್ಮಿಷ್ಟದ ವೃತ್ತಿಯಲ್ಲಿ ಉತ್ಸಾಹದಿಂದ ಮುನ್ನುಗ್ಗಿದಲ್ಲಿ ದೊಡ್ಡ ಸಾಧನೆ ಶತಸಿದ್ಧ ಎಂದು ಗೋವಾದ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆಯಯ (ಸಿ.ಎಸ್.ಐ.ಆರ್) ನಿರ್ದೇಶಕ ಪ್ರೊ.ಸುನೀಲ ಕುಮಾರ್ ಸಿಂಗ್ ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಾಧನೆಗೆ ನಂಬಿಕೆಯೇ ಕೀಲಿಕೈ. ನಿಮ್ಮ ಮೇಲಿನ ನಂಬಿಕೆಯನ್ನು ನೀವು ಯಾವಾಗಲು ಕಳೆದುಕೊಳ್ಳಬಾರದು. ಅದನ್ನು ಉಳಿಸಿಕೊಂಡು ಮುಂದೆ ಸಾಗಬೇಕು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಅದು ಎಂದಿಗೂ ನಿಲ್ಲಬಾರದು. ಜ್ಞಾನವು ಎಂತಹ ಸಂಪತ್ತೆಂದರೆ ಅದನ್ನು ಕೌಶಲ್ಯಪೂರ್ಣ ಕಳ್ಳನು ಕದಿಯಲು ಸಾಧ್ಯವಿಲ್ಲ ಎಂದರು.