ಜೂ.13ರಿಂದ ಅತಿಥಿ ಶಿಕ್ಷಕರ ಅನಿರ್ದಿಷ್ಟಾವಧಿ ಧರಣಿ

ಆರ್. ಶಿಲ್ಪ ಅತಿಥಿ ಶಿಕ್ಷಕರು
ಆರ್. ಶಿಲ್ಪಾ
Published on

ತಿ.ನರಸೀಪುರ: ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಜೂನ್ 13ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅತಿಥಿ ಶಿಕ್ಷಕರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷೆ ಆರ್.ಶಿಲ್ಪಾ ಹೇಳಿದರು.

ಜಿಲ್ಲೆಯಲ್ಲಿ 1500 ಸಾವಿರ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಶಿಕ್ಷಕರಿಗೆ ಸೇವಾ ಭದ್ರತೆಯಿಲ್ಲ. ಕನಿಷ್ಠ ವೇತನವೂ ನೀಡುತ್ತಿಲ್ಲ. 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಶಿಕ್ಷಕರನ್ನು ಕಾಯಂ ಮಾಡುವುದಾಗಿ ಭರವಸೆ ನೀಡಿದರೂ ಇಲ್ಲಿಯವರೆಗೂ ಕಾಯಂಗೊಳಿಸಿಲ್ಲ. ಹೊರ ರಾಜ್ಯಗಳಲ್ಲಿ ಕನಿಷ್ಠ ಕೂಲಿಯಂತೆ ಪ್ರತಿ ತಿಂಗಳು 25 ಸಾವಿರ ರೂ. ವೇತನ ನೀಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ 12,500 ಸಾವಿರ ರೂ. ನೀಡುತ್ತಿದೆ ಎಂದರು.

ಸರ್ಕಾರ ಕಾಯಂ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಶೇ.50 ಹುದ್ದೆಗಳನ್ನು ಮೀಸಲಿಡಬೇಕು. ಅತಿಥಿ ಶಿಕ್ಷಕರಿಗೂ 7ನೇ ವೇತನ ಆಯೋಗದಂತೆ ವೇತನ ನೀಡಬೇಕು. ಸೇವಾ ಭದ್ರತೆ ಹಾಗೂ ಸುಪ್ರಿಂಕೋರ್ಟ್‌ನ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ವರ್ಷಕ್ಕೆ ಶೇ.5 ಕೃಪಾಂಕ ಹಾಗೂ ಸೇವಾ ಪ್ರಮಾಣ ಪತ್ರ ನೀಡಬೇಕು. ಅಂಗವಿಕಲ ಶಿಕ್ಷಕರಿಗೆ ಶೇ.10 ಮೀಸಲಾತಿ ನೀಡಬೇಕು. ಸರ್ಕಾರ ಒಂದು ವಾರದೊಳಗೆ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ತರಗತಿಗಳಿಂದ ಹೊರಗುಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ತಾಲೂಕು ಸಂಘದ ಕಾರ್ಯದರ್ಶಿ ಪ್ರದೀಪ್, ಎಂ.ಪಿ.ರಘು, ರಾಕೇಶ್, ದೀಪು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net