ಗುಡಿಬಂಡೆ: ತಾಲೂಕಿನ ಪಿಎಲ್ಡಿ ಬ್ಯಾಂಕ್ ಆಡಳಿತ ಮಂಡಳಿಯ 13 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 3 ಕ್ಷೇತ್ರಗಳ ಫಲಿತಾಂಶ ಪ್ರಕಟಿಸಿದ್ದು, ಉಳಿದ 3 ಕ್ಷೇತ್ರಗಳ ಫಲಿತಾಂಶವನ್ನು ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿರುವುದರಿಂದ ಎಣಿಕೆ ಮಾಡದೆ, ಮತ ಪೆಟ್ಟಿಗೆಯನ್ನು ಜಿಲ್ಲಾ ಖಜಾನೆ ಕಚೇರಿಗೆ ರವಾನೆ ಮಾಡಲಾಯಿತು.
ಪಿಎಲ್ಡಿ ಬ್ಯಾಂಕ್‌ನ ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಹಂಪಸಂದ್ರ ಕ್ಷೇತ್ರದಿಂದ ಕೆ.ಜಿ.ಆನಂದರೆಡ್ಡಿ, ಸಾಮಾನ್ಯ ದಪ್ಪರ್ತಿ ಕ್ಷೇತ್ರದಿಂದ ಎಂ.ವಿ.ಶಿವಣ್ಣ, ಸಾಮಾನ್ಯ ಉಲ್ಲೋಡು ಕ್ಷೇತ್ರದಿಂದ ಎ.ಅಮರನಾರಾಯಣರೆಡ್ಡಿ, ಸಾಮಾನ್ಯ ಹಳೇಗುಡಿಬಂಡೆ ಲಕ್ಷ್ಮೀನಾರಾಯಣ, ಸಾಮಾನ್ಯ ಸೋಮೇನಹಳ್ಳಿ ಕ್ಷೇತ್ರದಿಂದ ಎಸ್.ಎನ್.ವೆಂಕಟೇಶಪ್ಪ, ಪರಿಶಿಷ್ಟ ಪಂಗಡ ತಿರುಮಣಿ ಕ್ಷೇತ್ರದಿಂದ ಟಿ.ವಿ.ವೆಂಕಟೇಶ್, ಸಾಲಗಾರರ ವರ್ಗ-ಬಿ ಪೋಲಂಪಲ್ಲಿ ಕ್ಷೇತ್ರದಿಂದ ಪಿ.ಸಿ.ಮಂಜುನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದ ಎಲ್ಲೋಡು, ಗುಡಿಬಂಡೆ ಪಟ್ಟಣ, ಬೀಚಗಾನಹಳ್ಳಿ, ಚೆಂಡೂರು, ವರ್ಲಕೊಂಡ ಮತ್ತು ಸಾಲಗಾರರಲ್ಲದ ಕ್ಷೇತ್ರಕ್ಕೆ ಭಾನುವಾರ ಚುನಾವಣೆ ನಡೆದಿದ್ದು, ಎಲ್ಲೋಡು ಸಾಮಾನ್ಯ ಕ್ಷೇತ್ರದಿಂದ ಅಶ್ವತ್ಥರೆಡ್ಡಿ, ವರ್ಲಕೊಂಡ ಪರಿಶಿಷ್ಟ ಜಾತಿ ಕ್ಷೇತ್ರದಿಂದ ರಾಘವೇಂದ್ರ, ಗುಡಿಬಂಡೆ ಪಟ್ಟಣ ಪ್ರವರ್ಗ-ಎ ಕ್ಷೇತ್ರದಿಂದ ಭತ್ತಲಹಳ್ಳಿ ವೆಂಕಟೇಶಪ್ಪ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ. ಉಳಿದ ಬೀಚಗಾನಹಳ್ಳಿ, ಚೆಂಡೂರು ಹಾಗೂ ಸಾಲಗಾರರಲ್ಲದ ಕ್ಷೇತ್ರದ ಫಲಿತಾಂಶವನ್ನು ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ತಡೆಹಿಡಿಯಲಾಗಿದೆ. ಉಚ್ಛ ನ್ಯಾಯಾಲಯ ಹೆಚ್ಚುವರಿ ಮತಗಳಿಗೆ ಅವಕಾಶ ನೀಡಿದ್ದು, ಹೆಚ್ಚಿನ ಭದ್ರತೆಗಾಗಿ ಮತ ಪೆಟ್ಟಿಗೆಗಳನ್ನು ಜಿಲ್ಲಾ ಖಜಾನೆಯ ಲಾಕರ್‌ನಲ್ಲಿಡಲಾಗುತ್ತಿದೆ. ನ್ಯಾಯಾಲಯದ ಆದೇಶದ ನಂತರ ಮತ ಎಣಿಕೆ ಮಾಡಿ, ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ಪ್ರೇಮ್‌ಕುಮಾರ್ ತಿಳಿಸಿದರು.
ಫಲಿತಾಂಶ ಪ್ರಕಟಕ್ಕೆ ತಡೆ
ಬೀಚಗಾನಹಳ್ಳಿ ಕ್ಷೇತ್ರದಿಂದ ಪ್ರಭಾವತಿ, ಸರಸ್ವತಮ್ಮ, ಚೆಂಡೂರು ಕ್ಷೇತ್ರದಿಂದ ಸುಜಾತಾ, ಸುನೀತಾ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಕಾಶ್ ಮತ್ತು ಆನಂದ ಕಣದಲ್ಲಿದ್ದು ಫಲಿತಾಂಶ ಘೋಷಣೆಯಾಗಬೇಕಿದೆ.