

ವಿಜಯವಾಣಿ ಸುದ್ದಿಜಾಲ ಕಡಬ
ಶಿಥಿಲ ಕಟ್ಟಡಗಳಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಿಗೆ ನೂತನ ಕಟ್ಟಡ ಒದಗಿಸಲು ಅಗತ್ಯ ಅನುದಾನಕ್ಕಾಗಿ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ. ಆದ್ಯತೆ ಮೇರೆಗೆ ಸುಸಜ್ಜಿತ ಕಟ್ಟಡಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕುಂತೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಎಂಆರ್ಪಿಎಎಲ್ ಸಂಸ್ಥೆ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದ್ದು, ಕುಂತೂರು ಶಾಲೆಗೆ 3 ತರಗತಿ ಕೊಠಡಿ ನಿರ್ಮಿಸಲು ಸಂಸ್ಥೆಯ ಸಿಎಸ್ಆರ್ ನಿಧಿಯಲ್ಲಿ ಅನುದಾನ ಒದಗಿಸಲು ಮನವಿ ಮಾಡಲಾಗಿದೆ ಎಂದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿದರು. ಪೆರಾಬೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಕೆ., ಉಪಾಧ್ಯಕ್ಷೆ ವೇದಾವತಿ, ಮಾಜಿ ಅಧ್ಯಕ್ಷ ಚಂದ್ರಶೇಖರ ರೈ ಅಗತ್ತಾಡಿ, ಸದಸ್ಯರಾದ ಸದಾನಂದ ಕೋಟ್ಯಾನ್, ಮೋಹಿನಿ, ಸುಶೀಲಾ, ಮಮತಾ, ಮೆನ್ಸಿ, ಫಯಾಝ್, ಕಾವೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖಾಸಿಂ ಕುಂತೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಯೂಬ್ ಕುಂತೂರು, ಪ್ರಮುಖರಾದ ಪ್ರದೀಪ್ ರೈ ಮನವಳಿಕೆ, ಸುರೇಶ್ ದೇಂತಾರು, ಸುಭಿಕ್ಷರತ್ನ ರೈ ಗುತ್ತುಪಾಲು, ಜಿಪಂ ಸಹಾಯಕ ಇಂಜಿನಿಯರ್ ಕುಶ ಕುಮಾರ್ ಉಪಸ್ಥಿತರಿದ್ದರು. ಅಬ್ಬಾಸ್ ಕೋಚಕಟ್ಟೆ ಸ್ವಾಗತಿಸಿದರು. ಪ್ರಭಾಕರ್ ಶೆಟ್ಟಿ ಕೇವಳಪಟ್ಟೆ ಪ್ರಸ್ತಾವನೆಗೈದರು. ಮುಖ್ಯಶಿಕ್ಷಕಿ ಸುಮಿತ್ರಾ ನಿರೂಪಿಸಿದರು. ಪೆರಾಬೆ ಗ್ರಾ.ಪಂ. ಗ್ರಂಥಪಾಲಕಿ ಕೆ.ಜಯಕುಮಾರಿ ವಂದಿಸಿದರು.
ಕಟ್ಟಡ ಕುಸಿದು ಸುದ್ದಿಯಾಗಿತ್ತು
ಕಳೆದ ವರ್ಷದ ಮಳೆಗಾಲದಲ್ಲಿ ಕುಂತೂರು ಶಾಲೆಯ ಶಿಥಿಲಗೊಂಡಿದ್ದ ಕಟ್ಟಡದ ಪಂಚಾಂಗ ಬಲಪಡಿಸುವ ಸಲುವಾಗಿ ಜೆಸಿಬಿ ಯಂತ್ರ ಬಳಸಿ ಕಾಮಗಾರಿ ನಡೆಸುತ್ತಿದ್ದ ವೇಳೆ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡು ದೊಡ್ಡ ಸುದ್ದಿಯಾಗಿತ್ತು. ಬಳಿಕ ವಿದ್ಯಾರ್ಥಿಗಳಿಗೆ ಸ್ಥಳೀಯ ಖಾಸಗಿ ಕಟ್ಟಡದಲ್ಲಿ ತರಗತಿ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.