ಪೊಳಲಿ ಅಮ್ಮನೆಡೆಗೆ ನಮ್ಮ ನಡಿಗೆ ಪಾದಯಾತ್ರೆ

New Project (13)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ವಿಶ್ವ ಹಿಂದು ಪರಿಷತ್, ಬಜರಂಗದಳ ಬಂಟ್ವಾಳ ಪ್ರಖಂಡದ ಆಶ್ರಯದಲ್ಲಿ ಐದನೇ ವರ್ಷದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಮ್ಮನೆಡೆಗೆ ನಮ್ಮ ನಡಿಗೆ ಪಾದಯಾತ್ರೆ ಭಾನುವಾರ ನಡೆಯಿತು.

ವಿಹಿಂಪ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಪಾದಯಾತ್ರೆಗೆ ಚಾಲನೆ ನೀಡಿದರು. ಬೆಳಗ್ಗೆ 5.30ಕ್ಕೆ ಏಕಕಾಲದಲ್ಲಿ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ ಮತ್ತು ಪುದು ಗ್ರಾಮದ ಕಡೇಗೋಳಿ ಪೊಳಲಿ ದ್ವಾರದ ಬಳಿಯಿಂದ ಹಾಗೂ ಗುರುಪುರ ಕೈಕಂಬ ಪೊಳಲಿ ದ್ವಾರದಿಂದ ಬೆಳಗ್ಗೆ 6.30ಕ್ಕೆ ಆರಂಭವಾದ ಪಾದಯಾತ್ರೆ 9.30ರ ಹೊತ್ತಿಗೆ ಪೊಳಲಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಿಯ ಸಾನ್ನಿಧ್ಯದಲ್ಲಿ ಸಂಪನ್ನಗೊಂಡಿತು. ವಿಹಿಂಪ, ಬಜರಂಗದಳದ ಪ್ರಮುಖರಾದ ಡಾ.ಕೃಷ್ಣಪ್ರಸನ್ನ ಪುತ್ತೂರು, ಕ.ಕೃಷ್ಣಪ್ಪ, ಭರತ್ ಕುಮ್ಡೇಲು, ರಾಜೇಶ್ ಗಂಜಿಮಠ, ಸಂತೋಷ್ ಸರಪಾಡಿ, ಕೇಶವ ದೈಪಲ ಮೊದಲಾದವರು ನೇತೃತ್ವ ವಹಿಸಿದ್ದರು.

ಮನವಿ ಸಲ್ಲಿಕೆ : ಪೊಳಲಿ ದೇವಾಲಯಕ್ಕಾಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ದೇವಳದಿಂದ ಸುಸಜ್ಜಿತ ಗೋಶಾಲೆ ನಿರ್ಮಾಣ, ಹಿಂದು ಬಾಲಸಂಸ್ಕಾರ ಕೇಂದ್ರ ತೆರೆದು ಹಿಂದು ಧಾರ್ಮಿಕ ಶಿಕ್ಷಣ ನೀಡುವಂತಾಗಬೇಕು, ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ ಆಯೋಜಿಸಬೇಕು, ದೇವಳದ ಜಾತ್ರೆ, ಉತ್ಸವಾದಿ ಸಂದರ್ಭ ಹಿಂದು ಧಾರ್ಮಿಕ ದತ್ತಿ ಕಾಯ್ದೆಯನುಸಾರ ಹಿಂದುಗಳಿಗೆ ಮಾತ್ರ ವ್ಯಾಪಾರ, ವ್ಯವಹಾರ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ದೇವಳ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net