

ತುಮಕೂರು: ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುವ ಮುನ್ನ ಸುಟ್ಟು ಬದನೆಕಾಯಿ ತರಾ ಇದ್ದ ಮುದ್ದಹನುಮೇಗೌಡ ಈಗ ಪರವಾಗಿಲ್ಲ ಸ್ವಲ್ಪ ನೆಟ್ಟಗಾಗಿದ್ದಾರೆ ಎಂದು ಗುಬ್ಬಿ ಶಾಸಕ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಾಸ್ಯ ಚಟಾಕಿ ಹಾರಿಸಿದರು.
ಲೋಕಸಭಾ ಚುನಾವಣೆಗೆ ಕೈ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸುವ ಹಿನ್ನೆಲೆ ಗುರುವಾರ ಹಮ್ಮಿಕೊಂಡಿದ್ದ ರೋಡ್ ಶೋ ಉದ್ದೇಶಿಸಿ ಮಾತನಾಡಿದ ವಾಸು, ಯಾವೊಬ್ಬ ಬಿಜೆಪಿ ಸಂಸದರು ಮೋದಿ ಮುಂದೆ ಗಂಡಸಾಗಿ ನಿಂತು ಮಾತಾಡುವ ಧೈರ್ಯ ಇಲ್ಲ. ಮುದ್ದಹನುಮೇಗೌಡರು ಲೋಕಸಭೆಯಲ್ಲಿ ಸಮರ್ಥವಾಗಿ ಜನರ ಸಮಸ್ಯೆ ಇಡುವರು. ಅವರನ್ನು ಗೆಲ್ಲಿಸೋಣ ಎಂದರು.
ಸಿಎಂ ಸಿದ್ದರಾಮಯ್ಯ ಶಾಸ್ತ್ರ ಹೇಳೊದು ಇತ್ತೀಚೆಗೆ ಕಲಿತಿದ್ದಾರೆ ಅನ್ನುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ವಾಸು, ಶಾಸ್ತ್ರ ಮಾಟ ಮಂತ್ರ ಎಲ್ಲಾ ಎಚ್ಡಿಕೆ ಕುಟುಂಬಕ್ಕೆ ಇರುವಂತಹದ್ದು. ಎನ್‌ಡಿಎ 28 ಕ್ಕೆ 28 ಸ್ಥಾನ ಗೆಲೀವಿ ಅನ್ನುವ ಕುಮಾರಸ್ವಾಮಿ ಶಾಸ್ತ್ರ ಹೇಳ್ತಾರಾ? ಇವರಿಗೆ ಯಾರು ಹೇಳಿದ್ದಾರೆ,ಯಾವ ಮಾಟ ಮಾಡಿರೊರು ಹೇಳಿರೋದು ಎಂದು ತಿರುಗೇಟು ಕೊಟ್ಟರು.
ಇವರ ಟ್ರೆಂಡ್ ಒಂದೇ ಒಂದು. ನಾನು ಒಕ್ಕಲಿಗ ನನಗೆ ವೋಟ್ ಹಾಕಿ ಅನ್ನುವುದು. ಒಕ್ಕಲಿಗರಿಗೆ ಕುಮಾರಸ್ವಾಮಿ ಕೊಡುಗೆ ಏನು. ಎಲ್ಲಾ ಒಕ್ಕಲಿಗ ನಾಯಕರನ್ನ ತುಳಿಯುವಂತದ್ದು ಬಿಟ್ಟರೇ ಬೇರೆ ಏನು ಮಾಡಿಲ್ಲ. ಒಂದೆಡೆ ಅಳಿಯ,ಮಗ,ಮೊಮ್ಮಗ. ಕೋಲಾರದಲ್ಲಿ ಮೀಸಲಾತಿ ಇಲ್ಲವಾಗಿದ್ದರೆ ಸೊಸೆ ನಿಲ್ಲಿಸುತ್ತಿದ್ದರು ಎಂದು ಲೇವಡಿ ಮಾಡಿದರು.