ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ

ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ
Published on

ವಿರಾಜಪೇಟೆ: ರಾಜ್ಯ ಸರ್ಕಾರದ ಯಾವ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಶೇ.32 ಮತ ಗಳಿಸಿದ್ದು, ಈ ಬಾರಿ ಅದು ಶೇ.44.6ಕ್ಕೆ ಏರಿಕೆಯಾಗಿರುವುದೇ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಸಾಕ್ಷಿ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಯೋಜನೆಗಳು ರಾಷ್ಟ್ರ ಮಟ್ಟದ ನಿರ್ಣಯವಾಗಿದೆ. ಅದನ್ನು ಕೈ ಬಿಡುವ ನಿರ್ಧಾರ ಮುಖ್ಯಮಂತ್ರಿಗಳು ಹಾಗೂ ಶಾಸಕಾಂಗಕ್ಕೆ ಸೇರಿದೆ. ಯಾರು ಅದರ ಬಗ್ಗೆ ಮಾತನಾಡುವಂತಿಲ್ಲ. ಅದು ಮುಂದುವರಿಯುತ್ತದೆ. ಲೋಪವಿದ್ದರೆ ಮಾತ್ರ ಸರಿಪಡಿಸಿ ಮುನ್ನಡೆಸುತ್ತೇವೆ. ಎಂದಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ಇಲ್ಲವಾದರೆ ಅದು ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆಗೆ ಕಾರಣವಾಗುತ್ತದೆ. ಆದರಿಂದ ಜನರೇ ಇಂದು ಚುನಾವಣೆಯಲ್ಲಿ ಸಮತೋಲಿತ ತೀರ್ಪು ನೀಡಿರುವುದು ಪ್ರಶಂಸನೀಯ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ಹಂತದಲ್ಲಿನ ಚುನಾವಣೆಯಲ್ಲಿ ಮೈಸೂರು ಸೇರಿ 14 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆ ನಮಗೆ ನಿರಾಸೆ ತಂದಿದೆ. ಅಲ್ಲಿ 14 ಸ್ಥಾನದ ಪೈಕಿ 2 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಯಿತು. ಎರಡನೇ ಹಂತದಲ್ಲಿ ನಮ್ಮಗೆ 9 ಸ್ಥಾನ ಬಂದಿದೆ. ಒಟ್ಟಾರೆ ಸರ್ಕಾರ ಜನಪರ ಕೆಲಸಕ್ಕೆ ಮತದಾನದಲ್ಲಿ ಶೇಕಡವಾರು ಏರಿಕೆ ನಿದರ್ಶನವಾಗಿದೆ. ಆದರೆ ರಾಜ್ಯದ ದಕ್ಷಿಣ ಭಾಗದಲ್ಲಿ ನಾವು ಬಿಜೆಪಿ ಹಾಗೂ ಜಾತ್ಯತೀತ ಜನತಾದಳದ ಹೊಂದಾಣಿಕೆಯನ್ನು ಸರಿಯಾಗಿ ಗುರುತಿಸಿ ವಿಶ್ಲೇಷಿಸುವಲ್ಲಿ ವಿಫಲರಾಗಿದ್ದೇವೆ ಎಂದರು.

ವಿರಾಜಪೇಟೆಯಲ್ಲಿ ನಿರೀಕ್ಷಿತ ಮತ ಲಭಿಸಿಲ್ಲ. ಬಿಜೆಪಿಗೆ ಹೆಚ್ಚು ಮತ ಲಭ್ಯವಾಗಿದೆ. ಸಂಸದ ಯದುವೀರ್ ಅವರಿಗೆ ಅಭಿನಂದಿಸುತ್ತೇನೆ. ಅವರಿಂದ ಈ ಕ್ಷೇತ್ರಕ್ಕೆ ಜನಪರ ಕೆಲಸಗಳು ಆಗಬೇಕು, ಅಭಿವೃದ್ಧಿ ನಡೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕೆಂದು ಆಶಿಸುತ್ತೇನೆ ಎಂದರು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭೆ ಸದಸ್ಯರಾದ ಮನೆಯಪಂಡ ದೇಚಮ್ಮ, ಮತ್ತೀನ್ ರಾಜೇಶ್‌ಪದ್ಮನಾಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net