

* ಯೋಜನೆಗಳ ಅನುಷ್ಠಾನ ಕಾರ್ಯಾಗಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮೆಚ್ಚುಗೆ
* ಅಗತ್ಯ ಪ್ರಚಾರ ಮಾಡಿ ಮಹತ್ವ ಸಾರಲು ಕರೆ
ರಾಮನಗರ
ಬಿಜೆಪಿ ಮತ್ತು ದಳದವರು ಕುತಂತ್ರ ಮಾಡಿ, ಗ್ಯಾರಂಟಿ ಯೋಜನೆ ಜಾರಿಯಾಗದಂತೆ ಸಂಚು ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಯೋಜನೆಗಳ ಮಹತ್ವ ಮತ್ತು ಅಗತ್ಯವನ್ನು ಪ್ರಚಾರ ಮಾಡುವ ಮೂಲಕ ಪ್ರತಿತಂತ್ರ ಹೂಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಯೋಜನೆಗಳ ಕುರಿತು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರ ಜನರ ಬದುಕು ದುಸ್ತರವಾಗಿತ್ತು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಜನರ ಬದುಕು ಸುಧಾರಿಸಲು ಏನೂ ಮಾಡಲಿಲ್ಲ. ಆದರೆ, ನಮ್ಮ ಪಕ್ಷ ಚುನಾವಣೆೆಯಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಜಾರಿಗೆ ತಂದೆವು. ಈಗ ಲಾಂತರ ಕುಟುಂಬಗಳ ಬದುಕಿಗೆ ಗ್ಯಾರಂಟಿಗಳು ನೆರವಾಗಿವೆ ಎಂದರು.
ಜಿಲ್ಲಾ ಮತ್ತು ತಾಲೂಕುಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರಕ್ಕೆ ಸರ್ಕಾರವು ಶಾಸಕನಿಗಿಂತಲೂ ಹೆಚ್ಚು ಶಕ್ತಿ ಕೊಟ್ಟಿದೆ. ಅದರ ಮಹತ್ವ ಅರಿತು ಕೆಲಸ ಮಾಡಬೇಕು. ಯೋಜನೆಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಇದೇ ಮೊತ್ತವನ್ನು ನಮ್ಮ ಶಾಸಕರಿಗೆ ಕೊಡಬಹುದು ಎಂಬ ಆಲೋಚನೆ ವಿರೋಧ ಪಕ್ಷದವರದ್ದು. ಆದರೆ, ಅದು ಸಾಧ್ಯವಿಲ್ಲ. ಯೋಜನೆಗಳ ಮಹತ್ವದ ಬಗ್ಗೆ ಜನರು ಮಾತನಾಡಿಕೊಳ್ಳುವಂತೆ ನಮ್ಮವರು ವಾಸ್ತವಾಂಶವನ್ನು ಪ್ರಚಾರ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿಮಟ್ಟದಲ್ಲಿ ಯೋಜನೆಗಳ ಫಲಾನುಭವಿಗಳ ಕುರಿತು ಪ್ರಾಧಿಕಾರದವರು ಸಮಾವೇಶ ಮಾಡಬೇಕು. ಅಲ್ಲಿ ಅನುಕೂಲ ಪಡೆದ ಫಲಾನುಭವಿಗಳಿಂದಲೇ ಮಾತನಾಡಿಸಬೇಕು. ಸಮಾವೇಶಗಳನ್ನು ಎಲ್ಲ ಕಡೆ ತಪ್ಪದೆ ಆಯೋಜಿಸಿ ಯೋಜನೆಗಳ ಪ್ರಚಾರ ಮಾಡಿಸಬೇಕು. ಫಲಾನುಭವಿಗಳಲ್ಲಿ ಕೆಲ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿದರು. ಡಾ.ಎಚ್.ವಿ.ವಾಸು, ಗ್ಯಾರಂಟಿ ಯೋಜನೆಗಳ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗಡೆ, ಎಂಎಲ್ಸಿ ಎಸ್.ರವಿ, ಬೆಂಗಳೂರು ನಗರ ಜಿಲ್ಲೆಯ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಎಸ್ಪಿ ಆರ್.ಶ್ರೀನಿವಾಸ ಗೌಡ ಮುಂತಾದವರು ಇದ್ದರು.
ಪಂಚಾಯಿತಿಮಟ್ಟದಲ್ಲಿ ಫಲಾನುಭವಿಗಳ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ, ಸರ್ಕಾರದ ಜನಪರ ಯೋಜನೆಗಳನ್ನು ತಿಳಿಸಬೇಕು. ಬಿಜೆಪಿಯ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಸಲಹೆ ನೀಡಿದ ಡಿಸಿಎಂ, ಬೂತ್ಮಟ್ಟದಲ್ಲಿ ಡಿಜಿಟಲ್ ಯೂತ್ ಗ್ರೂಪ್ ರಚಿಸಬೇಕು. ನಮ್ಮ ಸರ್ಕಾರದ ಯೋಜನೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಬೇಕು. ಪ್ರತಿ ಫಲಾನುಭವಿಗಳ ಮತ್ತು ಮನೆಗಳ ಸಂಪರ್ಕ ಇಟ್ಟುಕೊಳ್ಳಬೇಕು. ಅವರನ್ನೇ ರಾಯಭಾರಿಯಾಗಿ ಮಾಡಬೇಕು. ಈ ಎಲ್ಲ ಕೆಲಸಗಳು ಪಕ್ಷಾತಿತವಾಗಿರಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನ್ಯಾಯದ ಚಿಂತನೆಯನ್ನು ಗ್ಯಾರಂಟಿ ಯೋಜನೆಗಳ ಮೂಲಕ, ಸಿದ್ದರಾಮಯ್ಯ ಅವರೊಂದಿಗೆ ಸಾಕಾರಗೊಳಿಸಿದ್ದು ಡಿ.ಕೆ. ಶಿವಕುಮಾರ್. ಯೋಜನೆಗಳಡಿ ಇದುವರೆಗೆ ಸುಮಾರು 1 ಲಕ್ಷ ಕೋಟಿ ರೂ. ಮೊತ್ತ ಜನರ ಖಾತೆಗೆ ಹೋಗಿದೆ. ಜನರ ಆರ್ಥಿಕ ಸ್ಥಿತಿ ಸುಧಾರಿಸಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಕರೆಯುವುದು ಆತ್ಮವಂಚನೆಯಾಗುತ್ತದೆ ಎಂದರು.
ಪ್ರಾಧಿಕಾರದ ಜಿಲ್ಲಾ ಮತ್ತು ತಾಲೂಕುಮಟ್ಟದಲ್ಲಿ 15 ಜನರನ್ನು ಒಳಗೊಂಡ ಸಮಿತಿ ರಚಿಸಿದೆ. ಅವರು ಅಧಿಕಾರಿಗಳ ಜತೆಗೂಡಿ ಗ್ರಾಮಮಟ್ಟದಲ್ಲಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ನಾನು ಡಿಸಿಎಂ ಆದ ಬಳಿಕ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಆಗ ಅವರು, ಗ್ಯಾರಂಟಿ ಯೋಜನೆಗಳನ್ನು ವರ್ಷಕ್ಕೆ ಒಂದರಂತೆ ಜಾರಿಗೆ ತರುತ್ತೀರಾ? ಎಂದಿದ್ದರು. ನಾನು ನಕ್ಕು ಸುಮ್ಮನಾಗಿದ್ದೆ. ನಾವು ಅಧಿಕಾರಕ್ಕೆ ಬಂದ ಐದೇ ತಿಂಗಳಿಗೆ ಐದೂ ಯೋಜನೆಗಳನ್ನು ಜಾರಿಗೆ ತಂದೆವು.> ಡಿ.ಕೆ.ಶಿವಕುಮಾರ್ಉಪಮುಖ್ಯಮಂತ್ರಿಜಿಲ್ಲೆಗೆ ಸುಮಾರು ಎರಡು ಸಾವಿರ ಕೋಟಿ ರೂ. ಗ್ಯಾರಂಟಿ ಹಣ ಬಿಡುಗಡೆಯಾಗಿದೆ. ಚನ್ನಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಫಲಾನುಭವಿಗಳಿರುವುದು ಹೆಮ್ಮೆ. ಯೋಜನೆಯನ್ನು ಘೋಷಿಸಿದಾಗ ವಿರೋಧ ಪಕ್ಷದಲ್ಲಿದ್ದ ನಾನು ಸಹ ಬಿಟ್ಟಿ ಭಾಗ್ಯ ಎಂದು ಟೀಕಿಸಿದ್ದೆ. ಆದರೆ, ಕೊಟ್ಟ ಮಾತಿನಂತೆ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಸ್ವಾವಲಂಬನೆಯಲ್ಲಿ ಯೋಜನೆಗಳು ವಹಿಸಿದ ಪಾತ್ರ ಮಹತ್ತರವಾಗಿದೆ.> ಸಿ.ಪಿ.ಯೋಗೇಶ್ವರ್,
ಶಾಸಕ, ಚನ್ನಪಟ್ಟಣ
ದೇಶದ ರಾಜಕೀಯ ಇತಿಹಾಸದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಮೈಲಿಗಲ್ಲಾಗಿವೆ. ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ. ಇವುಗಳ ಅನುಷ್ಠಾನ ಕುರಿತು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ನಿಗಾ ಇಡಲಾಗುತ್ತಿದೆ. ಮುಂದೆ ಯಾರೂ ಇಂತಹ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ.> ಎಚ್.ಎ.ಇಕ್ಬಾಲ್ ಹುಸೇನ್,ಶಾಸಕ ರಾಮನಗರ