ಬೆಳ್ತಂಗಡಿ: ತಾಲೂಕುಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಚೇರಿಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು.
ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು ಚರ್ಚಿಸಲಾಯಿತು. ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಆಯಾ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಲಾಯಿಲ- ಕೊಲ್ಲಿ ಮತ್ತು ಬಜಿರೆ- ಗುಂಡೂರಿ- ಹೊಕ್ಕಾಡಿಗೋಳಿ ರಸ್ತೆಗಳಲ್ಲಿ ಸರ್ಕಾರಿ ಬಸ್ ಸೌಕರ್ಯ ಒದಗಿಸಲು ಮೇಲಧಿಕಾರಿಗಳಿಗೆ ಬರೆದುಕೊಳ್ಳಲು ಒತ್ತಾಯಿಸಲಾಯಿತು. ಸರಕು ಸೇವಾ ತೆರಿಗೆ ನೋಂದಣಿದಾರರಾಗಿದ್ದು, ತೆರಿಗೆ ಪಾವತಿದಾರರಲ್ಲದವರು ಗೃಹಲಕ್ಷ್ಮೀ ಯೋಜನೆಯಡಿ ಸೌಲಭ್ಯ ವಂಚಿತರಾಗಿದ್ದು, ಈ ಬಗ್ಗೆ ಪುನರ್ ಪರಿಶೀಲನೆಗಾಗಿ ಸರ್ಕಾರಕ್ಕೆ ಬರೆಯಲು ತೀರ್ಮಾನಿಸಲಾಯಿತು. ಮನೆಗಳಿಗೆ ಅಪಾಯಕಾರಿಯಾಗಿರುವ ವಿದ್ಯುತ್ ಕಂಬ ಮತ್ತು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರಗಳ ರೆಂಬೆಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಲಾಯಿತು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಾಲೂಕು ಅನುಷ್ಠಾನ ಸಮಿತಿ ಸದಸ್ಯರು, ಇಲಾಖಾಧಿಕಾರಿಗಳು, ತಾಲೂಕು ಪಂಚಾಯಿತಿ ಅಧೀಕ್ಷಕ ಡಿ.ಪ್ರಶಾಂತ್ ಮತ್ತು ನೋಡಲ್ ಅಧಿಕಾರಿ ಹೆರಾಲ್ಡ್ ಸ್ವಿಕ್ವೇರಾ ಉಪಸ್ಥಿತರಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ವಂದಿಸಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಈವರೆಗೆ ಬೆಳ್ತಂಗಡಿ ತಾಲೂಕಿಗೆ ಒಟ್ಟು 427,70,53,377 ರೂ. ಅನುದಾನ ಮಂಜೂರಾಗಿದೆ. ಪದ್ಮನಾಭ ಸಾಲ್ಯಾನ್ ಗ್ಯಾರಂಟಿ ಸಮಿತಿ ಅಧ್ಯಕ್ಷ