ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ನಿಂದ ಜನರ ಲೂಟಿ

Guarantee, Congress, Looting, Corruption,
Published on

ದಾವಣಗೆರೆ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದು, ಶ್ರೀಸಾಮಾನ್ಯನಿಗೆ ದ್ರೋಹ ಎಸಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಜಿ.ವಿ.ಎಲ್. ನರಸಿಂಹರಾವ್ ಆರೋಪಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದ್ದೇ ಭ್ರಷ್ಟಾಚಾರ ಮಾಡಲು.

ಈಗ ಅವುಗಳನ್ನು ಅನುಷ್ಠಾನಗೊಳಿಸದೇ ಜನರಿಗೆ ಮೋಸ ಮಾಡುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ನ ದ್ರೋಹಗಳ ಬಗ್ಗೆ ಜನರಿಗೆ ಅರಿವಾಗಲಿದೆ ಎಂದರು.

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲೂ ಕಾಂಗ್ರೆಸ್ ಉಚಿತ ಘೋಷಣೆ ಮಾಡುವ ಮೂಲಕ ಗೆಲುವು ಪಡೆದು ಜನರನ್ನ್ನು ವಂಚಿಸಿತ್ತು. ನಂತರದ ದಿನಗಳಲ್ಲಿ ಜನರು ಅಲ್ಲಿ ತಕ್ಕ ಪಾಠ ಕಲಿಸಿದ್ದಾರೆ.

ಅದೇ ರೀತಿ ಕರ್ನಾಟಕದ ಜನರು ತಕ್ಕ ಉತ್ತರ ನೀಡಲಿದ್ದಾರೆ. ಗ್ಯಾರಂಟಿ ಹಾಗೂ ಭ್ರಷ್ಟಾಚಾರಗಳು ಕಾಂಗ್ರೆಸ್ ಅನ್ನು ವಿನಾಶದತ್ತ ದೂಡುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳು ಕಳೆದಿಲ್ಲ. ಆಗಲೇ ಮೂರರಿಂದ ನಾಲ್ಕು ಬಾರಿ ದಿನಸಿ ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿದೆ.

ಒಂದು ಕೆ.ಜಿ. ಟೊಮ್ಯಾಟೋ 20ರಿಂದ 120 ರೂ.ಗೆ ಹೆಚ್ಚಾಗಿದೆ. ಇದನ್ನು ಸಾಮಾನ್ಯ ಪ್ರಜೆಗಳು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಎಂದರೆ ಶೇ. 100ರಷ್ಟು ಭ್ರಷ್ಟಾಚಾರ ಎಂದು ಕುಟುಕಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮುಖಂಡರಾದ ಬಿ.ಎಸ್. ಜಗದೀಶ್, ಮಂಜಾನಾಯ್ಕ, ಶಿವರಾಜ ಪಾಟೀಲ್, ಕೊಟ್ರೇಶ್‌ಗೌಡ, ಲಿಂಗಾರಾಜ್ ಗೌಡ, ಓದೋ ಗಂಗಪ್ಪ, ಶಾಂತರಾಜ್ ಪಟೇಲ್, ಶಿವರಾಜ್ ಪಾಟೀಲ್, ಕೊಟ್ರೇಶ್ ಗೌಡ್ರು, ಲಿಂಗರಾಜ್ ಗೌಡ್ರು, ಬಸವರಾಜಯ್ಯ, ಎಚ್.ಪಿ. ವಿಶ್ವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net