ಅರಕಲಗೂಡಿನಲ್ಲಿ ಜಿಟಿಜಿಟಿ ಮಳೆ

ಅರಕಲಗೂಡಿನಲ್ಲಿ ಜಿಟಿಜಿಟಿ ಮಳೆ
Published on

ಅರಕಲಗೂಡು: ತಾಲೂಕಿನಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು ಸೋಮವಾರವೂ ಜಿಟಿ ಜಿಟಿ ಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಿತು.

ಕಳೆದ ಕೆಲ ದಿನಗಳಿಂದ ಬಿಡುವಿಲ್ಲದೆ ಬೀಳುತ್ತಿರುವ ಮಳೆ ಮತ್ತು ಶೀತ ಗಾಳಿ ಆರ್ಭಟಕ್ಕೆ ಜನ ತತ್ತರಿಸುವಂತಾಗಿದೆ. ಸೋಮವಾರವೂ ಬಿಟ್ಟು ಬಿಟ್ಟು ಮಳೆ ಸುರಿಯಿತು. ಜಮೀನುಗಳಲ್ಲಿ ಕೆಲಸ ಮಾಡುವವರು, ನಿತ್ಯದ ವ್ಯಾಪಾರೋದ್ಯಮ ನಡೆಸುವವರು ಪರದಾಡುವಂತಾಯಿತು. ಸೋಮವಾರ ನಡೆದ ವಾರದ ಸಂತೆಯಲ್ಲಿ ಖರೀದಿಸಲು ಮಳೆ ಅಡ್ಡಿಯಾಯಿತು.

ಕಾವೇರಿ ಜಲಾಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವುದರಿಂದ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತವಾಗಿವೆ.

ಗೋಡೆ ಕುಸಿತ: ಮಲ್ಲಿಪಟ್ಟಣದಲ್ಲಿ ಮಳೆ ಗಾಳಿಗೆ ಸರ್ಕಾರಿ ಪ್ರೌಢಶಾಲೆ ಛಾವಣಿ ಹಾರಿ ಹೋಗಿದೆ. ತಾಲೂಕಿನ ಮಲ್ಲಿನಾಥಪುರದಲ್ಲಿ ಮಳೆ ಗಾಳಿ ಆರ್ಭಟಕ್ಕೆ ಶಿವಣ್ಣ ಎಂಬುವರ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಧರ್ಮೇಶ್ ಭೇಟಿ ನೀಡಿ ಪರಿಶೀಲಿಸಿದರು.

ಮಳೆ ವಿವರ: ತಾಲೂಕಿನ ಮಳೆ ಮಾಪನದಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಮಲ್ಲಿಪಟ್ಟಣದಲ್ಲಿ 18.2 ಮಿಮೀ, ಕಸಬಾ 6.2 ಮಿಮೀ, ದೊಡ್ಡಬೆಮ್ಮತ್ತಿ 12.2 ಮಿಮೀ ಮತ್ತು ದೊಡ್ಡಮಗ್ಗೆಯಲ್ಲಿ 30.0 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net