ರಾಜಮನೆತನಕ್ಕೆ ಮತ ಹಾಕಿದರೆ ಚಾಮುಂಡೇಶ್ವರಿಗೆ ಹೂವು ಹಾಕಿದಂತೆ: ಜಿ.ಟಿ. ದೇವೇಗೌಡ

GT Devegowda
Published on

ಮೈಸೂರು: ಇತ್ತೀಚಿಗೆ ಬಿಡುಗಡೆಯಾದ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್​ ಸಿಂಹಗೆ ಕೊಕ್​ ನೀಡಿ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಬಿಜೆಪಿ ಹೈಕಮಾಂಡ್​ ಮಣೆ ಹಾಕಿದೆ. ಈಗಾಗಲೇ ಪ್ರಚಾರ ಆರಂಭಿಸಿರುವ ಯದುವೀರ್​ ಸ್ಥಳೀಯ ನಾಯಕರು ಹಾಗೂ ಜನರ ಭೇಟಿಯಲ್ಲಿ ನಿರತರಾಗಿದ್ದಾರೆ.

ಇನ್ನೂ ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ, ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಹಾಗಾಗಿ ನಮ್ಮ ವೋಟ್​ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ ಎಂದು ಹೇಳಿದ್ದಾರೆ.

ಈ ಹಿಂದೆ ಪತ್ರಕರ್ತನಾಗಿದ್ದ ಪ್ರತಾಪ್ ಸಿಂಹನನ್ನ ಒಂದು ರೂಪಾಯಿ ಪಡೆಯದೇ ಗೆಲ್ಲಿಸಿದ್ದೇವೆ. ಅವರು ಕೂಡ ಒಂದು ರೂಪಾಯಿ ಪಡೆಯದೇ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಪ್ರತಾಪ್ ಸಿಂಹರನ್ನು ಅಭಿನಂದಿಸುತ್ತೇನೆ. ಅವರು 10 ವರ್ಷಗಳಲ್ಲಿ ಎಷ್ಟು ಮನೆಗೆ ಭೇಟಿ ನೀಡಿದ್ದಾನೆ ಎಂದು ಹೇಳಿದ್ದಾರೆ.

GT Devegowda Yaduveer

ಯದುವೀರ್ ನಮ್ಮ ಎಂಪಿ ಆಗುತ್ತಾರೆ ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ. ಹಾಗಾಗಿ ನಮ್ಮ ವೋಟ್​ ಕೊಟ್ಟು ರಾಜಮನೆತನಕ್ಕೆ ಋಣ ಸಂದಾಯ ಮಾಡೋಣ. ಯದುವೀರ್‌ಗೆ ಅವಕಾಶ ಕೊಡಿ, ನಿಮ್ಮ ಮನೆ ಮನೆಗೆ ಬರುತ್ತಾರೆ. ಮಹಾರಾಜರು ಎಂಪಿಯಾದರೆ ನಿಮ್ಮ ಅಭಿವೃದ್ಧಿ ಬಾಗಿಲು ತೆರೆಯುತ್ತದೆ. ಬಡವರ ಕಷ್ಟಕ್ಕೆ ಆಗುತ್ತಾರೆ. ಯದುವೀರ್‌ಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರೇ ಗೌರವ ಕೊಡುತ್ತಾರೆ ಎಂದು ಹೇಳಿದ್ದಾರೆ.

ಮೈಸೂರು ಮಹರಾಜರ ಕೊಡುಗೆ ನಿಮಗೆ ತಿಳಿದಿದೆ. ಮೀಸಲಾತಿ ಜಾರಿ ಮಾಡಿದ್ದೆ ಮೈಸೂರು ಮಹರಾಜರು. ಇವತ್ತು ಕೆಲವರು ನಾವು ಕೊಟ್ಟೆವು ಎಂದು ಹೇಳುತ್ತಾರೆ. ನಾನು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್​ರನ್ನ ಭಕ್ತಿಯಿಂದ ನೋಡುತ್ತಿದ್ದೆವು. ಮೈಸೂರು ಮಹರಾಜರ ಕುಟುಂಬದ ಜೊತೆ ಈಗಲೂ ಉತ್ತಮ ಒಡನಾಟ, ಅಭಿಮಾನ ಇದೆ. ನಮ್ಮ ಮತ್ತೆ ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರವಾಗಿ ವೈಮನಸ್ಸಿಲ್ಲ.

ಈಗಾಗಲೇ ಬಿಜೆಪಿಯವರು 25 ಕ್ಷೇತ್ರ ಗೆದ್ದಿದ್ದಾರೆ. ಇನ್ನು ಗೆಲ್ಲಬೇಕಿರುವುದು ಮೂರು ಕ್ಷೇತ್ರ. ಆ ಮೂರು ಕ್ಷೇತ್ರ ಮಂಡ್ಯ, ಹಾಸನ, ಕೋಲಾರ ಮಾತ್ರ ಜೆಡಿಎಸ್ ಕೇಳುತ್ತದೆ. 28ಕ್ಕೆ 28 ಕ್ಷೇತ್ರವನ್ನ ಮೈತ್ರಿ ಅಭ್ಯರ್ಥಿಗಳು ಗೆದ್ದರೆ, ನಮ್ಮ ಎಲ್ಲಾ ಕೆಲಸಗಳು ಆಗುತ್ತವೆ. ಯಾರು ಎಷ್ಟೇ ಹಣ ಆಮಿಷ ನೀಡಲಿ. ನಾವೆಲ್ಲರೂ ಸೇರಿ ಯದುವೀರ್ ಒಡೆಯರ್​ರನ್ನ ಗೆಲ್ಲಿಸೋಣ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಶಾಸಕ ಜಿ.ಟಿ. ದೇವೇಗೌಡ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net