ಜಿಎಸ್‌ಟಿ ಇಳಿಕೆ ಜನರಿಗೆ ಉಡುಗೊರೆ

ಜಿಎಸ್‌ಟಿ ಇಳಿಕೆ ಜನರಿಗೆ ಉಡುಗೊರೆ
Published on

ಹಾಸನ: ದೇಶದ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ 11 ವರ್ಷಗಳ ಸರ್ಕಾರದ ಯಶಸ್ಸಿನ ಭಾಗವಾಗಿ ಜಿಎಸ್‌ಟಿ ದರ ಇಳಿಕೆ ಮಾಡಿರುವುದು ಜನಸಾಮಾನ್ಯರಿಗೆ ದೊಡ್ಡ ಉಡುಗೊರೆಯಾಗಿದೆ ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.

ಆಹಾರ ಪದಾರ್ಥಗಳು, ಔಷಧಗಳು, ಎಲೆಕ್ಟ್ರಾನಿಕ್ಸ್ ಸೇರಿ ಸುಮಾರು 375 ವಸ್ತುಗಳು ಅಗ್ಗವಾಗಲಿವೆ. ಆದರೆ ಐಷಾರಾಮಿ ವಸ್ತುಗಳ ಮೇಲಿನ ತೆರಿಗೆ ಹೆಚ್ಚಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನಂದಿನಿ ಉತ್ಪನ್ನಗಳ ಬೆಲೆ ಕೂಡ ಇಳಿಕೆ ಕಾಣಲಿದೆ. ಹಾಲು ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಚೀಸ್, ಪನೀರ್ ಸೇರಿದಂತೆ ಅನೇಕ ವಸ್ತುಗಳು ಅಗ್ಗವಾಗಲಿವೆ. ಈಗಿನ 4 ಸ್ಲಾೃಬ್‌ಗಳು (5%, 12%, 18%, 28%) ಬದಲಾಗಿ ಕೇವಲ 2 ಸ್ಲಾೃಬ್‌ಗಳು (5% ಮತ್ತು 18%) ಜಾರಿಗೆ ಬರಲಿವೆ. ಆಹಾರ ಪದಾರ್ಥಗಳಲ್ಲಿ ಹಾಲು, ಕಾಫಿ, ಬಿಸ್ಕತ್ತುಗಳು, ಧಾನ್ಯಗಳು, ಕಾರ್ನ್‌ಫ್ಲೇಕ್ಸ್, ಕುಡಿಯುವ ನೀರು, ತುಪ್ಪ, ಐಸ್ ಕ್ರೀಮ್, ಜಾಮ್, ಕಿಚನ್ ವಸ್ತುಗಳು ಹಾಗೂ ತೆಂಗಿನ ನೀರು ಅಗ್ಗವಾಗಲಿವೆ. ದಿನನಿತ್ಯ ಬಳಕೆಯ ವಸ್ತುಗಳಾದ ಶಾಂಪು, ಪೇಸ್ಟ್, ಕಾಸ್ಮೆಟಿಕ್ಸ್, ಫೇಸ್ ಕ್ರೀಮ್, ಟೂತ್ ಬ್ರಷ್, ಸೋಪ್ ಇತ್ಯಾದಿಗಳ ಬೆಲೆ ಇಳಿಕೆಯಾಗಲಿದೆ ಎಂದರು.

ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಟಿವಿ, ವಾಷಿಂಗ್ ಮೆಷಿನ್, ಏರ್ ಕಂಡೀಷನರ್, ಡಿಶ್‌ವಾಶರ್ ಬೆಲೆ ಅಗ್ಗವಾಗಲಿದೆ. 33 ಜೀವ ರಕ್ಷಕ ಔಷಧ, ಡಯಾಗ್ನೋಸ್ಟಿಕ್ ಕಿಟ್‌ಗಳು, ಗ್ಲುಕೋಮೀಟರ್ ಸೇರಿದಂತೆ ಅನೇಕ ವೈದ್ಯಕೀಯ ಸಾಧನಗಳ ಬೆಲೆ ಕಡಿಮೆಯಾಗಲಿದೆ. ಹೆಲ್ತ್ ಇನ್ಶುರೆನ್ಸ್ ಮೇಲಿನ ತೆರಿಗೆ ಕೂಡ ಕಡಿತಗೊಂಡಿದೆ. ಕ್ಷೌರಿಕರು, ಫಿಟ್‌ನೆಸ್ ಸೆಂಟರ್‌ಗಳು, ಯೋಗ ಮತ್ತು ಆರೋಗ್ಯ ಸೇವೆಗಳ ಮೇಲಿನ ಜಿಎಸ್‌ಟಿ ಕೂಡ ಇಳಿಕೆ ಕಾಣಲಿದೆ. ಘೋಷಿಸಿರುವ ಈ ಸುಧಾರಣೆಗಳು ಮಧ್ಯಮ ವರ್ಗದ ಜನತೆಗೆ ದೊಡ್ಡ ರಿಲೀಫ್ ಆಗಲಿವೆ ಎಂದು ಹೇಳಿದರು.

ಮಧ್ಯರಾತ್ರಿಯಿಂದಲೇ ಪರಿಸ್ಕೃತ ದರ ಜಾರಿಗೆ ಬಂದಿದೆ. ಜಿಎಸ್‌ಟಿ ಕೌನ್ಸಿಲ್ ಈ ವರ್ಷ ಘೋಷಿಸಿರುವ ಜಿಎಸ್‌ಟಿ ಸುಧಾರಣೆಗಳು ಪ್ರತಿಯೊಂದು ವಸ್ತುಗಳು ಹಾಗೂ ಸೇವೆಗಳ ಮೇಲೆ ಪರಿಣಾಮ ಬೀರಲಿದ್ದು, ಇಂದಿನಿಂದ ಅನೇಕ ಸರಕು ಮತ್ತು ಸೇವೆಗಳ ಬೆಲೆ ಕಡಿಮೆಯಾಗಲಿದೆ ಎಂದರು. ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಎಸ್.ಡಿ. ಚಂದ್ರು, ಗಿರೀಶ್, ಚೇತನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net