

ಕಲಬುರಗಿ : ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ನಿಟ್ಟಿನಲ್ಲಿ ಇಂದು ಐತಿಹಾಸಿಕ ದಿನವಾಗಿದೆ. ಹಣದುಬ್ಬರದಿಂದ ಬೇಸತ್ತ ಜನರನ್ನು ಆರ್ಥಿಕ ಸಬಲೀಕರಣವಾಗಿಸುವ ರಾಜ್ಯ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮನೆಯೊಡತಿಗೆ ಮಾಸಿಕ 2,000 ಒದಗಿಸುವ "ಗೃಹ ಲಕ್ಷ್ಮೀ" ಜನಪ್ರಿಯ ಯೋಜನೆಗೆ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರಲು ಈ ಯೋಜನೆ ರೂಪಿಸಲಾಗಿದೆ ಎಂದರು.
ಚುನಾವಣಾ ಪೂರ್ವ ಪ್ರಜಾ ಧ್ವನಿ ಪ್ರವಾಸ ಸಂದರ್ಭದಲ್ಲಿ ಜನ ಹಣದುಬ್ಬರ, ಬೆಲೆ ಏರಿಕೆಯಿಂದ ಮಕ್ಕಳ ಶಿಕ್ಷಣ ಕೊಡಿಸಲು ಆಗುತ್ತಿಲ್ಲ. ಮಕ್ಕಳಿಗೆ ಪೌಷ್ಟಿಕ ಆಹಾರ ನಿಡಕ್ಕಾಗುತ್ತಿಲ್ಲ. ನೌಕರಿ ಇಲ್ಲ ಎಂಬಿತ್ಯಾದ ಜನರು ತಮ್ಮ ಅಳಲು ತೋಡಿಕೊಂಡಿದ್ದರು. ಜನರ ನಾಡಿಮಿಡಿತ ಆಧಾರದ ಮೇಲೆಯೆ ಈ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಅಧಿಕಾರ ಸ್ವೀಕರಿಸಿ 100 ದಿನದಲ್ಲಿಯೇ 4 ಗ್ಯಾರಂಟಿ ಈಡೇರಿಸಿದ್ದೇವೆ. ಇಡೀ ದೇಶದಲ್ಲಿ ನುಡಿದಂತೆ ನಡೆಯುವ ಸರ್ಕಾರವಿದ್ದರೆ, ಅದು ಕರ್ನಾಟಕ ಸರ್ಕಾರ ಎಂದು ತಿಳಿಸಿದರು.
ಶಕ್ತಿ ಯೋಜನೆಯಡಿ ಪ್ರತಿ ದಿನ 60 ಲಕ್ಷದಂತೆ ಇದೂವರೆಗೆ 40 ಕೋಟಿ ಜನ ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಅನ್ನ-ಭಾಗ್ಯ ಯೋಜನೆಯಡಿ 4.47 ಕೋಟಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿ ನೀಡಿದ್ದು, ಉಳಿದ 5 ಕೆ.ಜಿ. ಅಕ್ಕಿಯ ಮೊತ್ತ 170 ರೂ. ಪ್ರತಿ ಸದಸ್ಯನಿಗೆ ಪಾವತಿ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ 70 ಲಕ್ಷ ಕುಟುಂಬ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಇಂದು ಗೃಹ ಲಕ್ಷ್ಮೀಗೆ ಚಾಲನೆ ನೀಡಲಾಗಿದೆ. ಇಂದಿನಿಂದ ಜಿಲ್ಲೆಯ ಎಲ್ಲಾ ನೊಂದಾಯಿತ ಫಲಾನುಭವಿಗಳಿಗೆ ಒಂದೆರಡು ದಿನದಲ್ಲಿ 2,000 ರೂಮ ಜಮೆ ಆಗಲಿದೆ ಎಂದ ಸಚಿವರು, ಜಿಲ್ಲೆಯಲ್ಲಿ 4.72 ಲಕ್ಷ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತಮಾಡಿ,ಪಂಚ ಗ್ಯಾರಂಟಿ ಯೋಜನೆಗಳು ಜನರು ಕಲ್ಯಾಣಕ್ಕಾಗಿ ರೂಪಿಸಿದೆ. ಗೃಹ ಲಕ್ಷ್ಮೀ ಯೋಜನೆಯಿಂದ ಸಿಗುವ 2,000 ರೂ. ಪುನಹ ಅದು ಆರ್ಥಿಕ ಚಟುವಟಿಕೆಯಿಂದ ಮರಳಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಬರುತ್ತೆ. ಮಹಿಳೆಯರನ್ನು ಆರ್ಥಿಕ ಚಟುವಟಿಕೆಯಲ್ಲಿ ತರುವುದೇ ಸರ್ಕಾರದ ಉದ್ದೇಶವಾಗಿದೆ ಎಂದರು.
ಮೈಸೂರಿನಲ್ಲಿ ನಡೆದ ಚಾಲನಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಿದರೆ, ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಿಮೋಟ್ ಒತ್ತುವ ಮೂಲಕ 1.10 ಕೋಟಿ ಮಹಿಳೆಯರಿಗೆ ಮಾಸಿಕ 2,000 ಕೋಟಿ ರೂ. ಡಿ.ಬಿ.ಟಿ. ಮೂಲಕ ವರ್ಗಾವಣೆಗೆ ಚಾಲನೆ ನೀಡಿದರು. ಮೈಸೂರು ಕಾರ್ಯಕ್ರಮದ ನೇರ ಪ್ರಸಾರಕ್ಕೆ ಕಲಬುರಗಿ ಜಿಲ್ಲೆಯಲ್ಲಿ 313 ಕಡೆ ವ್ಯವಸ್ಥೆ ಮಾಡಲಾಗಿತ್ತು.
4,72,782 ಜನ ನೋಂದಣಿ:
ಜಿಲ್ಲೆಯಲ್ಲಿ ಇದೂವರೆಗೆ ಅಫಜಲಪೂರ-41,591, ಆಳಂದ-57,774, ಚಿಂಚೋಳಿ-45,537, ಚಿತ್ತಾಪೂರ-42,555, ಕಾಳಗಿ-23,215 ಕಲಬುರಗಿ-1,28,257, ಜೇವರ್ಗಿ-35,094, ಯಡ್ರಾಮಿ-23,348, ಸೇಡಂ-39,237, ಕಮಲಾಪೂರ-29,013, ಶಹಾಬಾದ-7,071 ಸೇರಿದಂತೆ ಜಿಲ್ಲೆಯಾದ್ಯಂತ ನಿಗದಿತ ಗುರಿ 5,89,105 ಪೈಕಿ 4,72,782 ಫಲಾನುಭವಿಗಳು (ಶೇ.80) ನೋಂದಣಿ ಮಾಡಿಕೊಂಡಿದ್ದಾರೆ.
ಲಕ್ಷ್ಮೀಯರ ದಂಡೆ ಹರಿದು ಬಂದಿತ್ತು:
ಭೀಮಳಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವಿರಾರು ಗೃಹ ಲಕ್ಷ್ಮೀಯರ ದಂಡೇ ಹರಿದು ಬಂತು. ಕಲ್ಯಾಣ ಮಂಟಪದ ಆವರಣ ಸುತ್ತ ಹಬ್ಬದ ಮನೆ ಮಾಡಿತ್ತು. ಪ್ರವೇಶ ದ್ವಾರದಲ್ಲಿ ರಂಗೋಲಿಯ ರಂಗು, ಸಬಾಂಗಣ ಹೂ ಮತ್ತು ಬಲೂನ್‌ಗಳಿಂದ ಆಲಂಕೃತಗೊಂಡಿತ್ತು.
ಭೀಮಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಿದ್ದಮ್ಮ ಮಲ್ಲಿಕಾರ್ಜುನ ಬಂಗರೆ, ಉಪಾಧ್ಯಕ್ಷೆ ಜಯಶ್ರೀ ಶಿವಪುತ್ರ ಭಂಡಾರೆ,
ಡಿ.ಸಿ. ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ ಆರ್., ಎಸ್.ಪಿ. ಇಶಾ ಪಂತ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ ಯು., ಕಲಬುರಗಿ ತಹಶೀಲ್ದಾರ ನಾಗಮ್ಮ ಕಟ್ಟಿಮನಿ, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶರಣಕುಮಾರ ಮೋದಿ, ಪಿ.ಡಿ.ಓ ಭಾರತಿ ಮಣ್ಣೂರೆ ಸೇರಿದಂತೆ ಮಹಿಳಾ ಫಲಾನುಭವಿಗಳು, ಸಾರ್ವಜನಿಕರು ಇದ್ದರು.