

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಯಜಮಾನಿ ಖಾತೆಗೆ ತಿಂಗಳಿಗೆ 2 ಸಾವಿರ ರೂ.ನಗದು ಹಾಕುವ ವ್ಯವಸ್ಥೆ ಬುಧವಾರದಿಂದ ನಗರದಲ್ಲಿ ಅನಷ್ಠಾನಕ್ಕೆ ಬಂದಿದೆ.
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಲಾನುಭವಿಗಳ ಖಾತೆಗೆ ಹಣ ಹಾಕಲಾಯಿತು. ಟೌನ್‌ಹಾಲ್‌ನಲ್ಲಿ ಮುಖ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಬಿಎಂಪಿ ಆಡಳಿತಾಧಿಗಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಾರ್ಯಕ್ರಮ ಚಾಲನೆ ನೀಡಿದರು. ಬಳಿಕ, ಫಲಾನುಭವಿಗಳ ಬ್ಯಾಂಕ್ ಖಾತೆಗೆ 2 ಸಾವಿರ ರೂ.ಡಿಬಿಟಿ ಮಾಡಿದರು.
ಎಲ್ಲ ವಾರ್ಡ್‌ಗಳಲ್ಲೂ ವರ್ಚುವಲ್ ಮೂಲಕ ಫಲಾನುಭವಿ ಮಹಿಳೆಯರಿಗೆ ನೇರ ಪ್ರಸಾರದಲ್ಲಿ ವೀಕ್ಷಿಸಲು ಬಿಬಿಎಂಪಿ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೇಡಿಕೆಗೆ ಅನುಗುಣವಾಗಿ ನಗರದ ಇತರ ಕೆಲವು ಕಡೆಗಳಲ್ಲೂ ಹೆಚ್ಚುವರಿಯಾಗಿ ನೇರ ಪ್ರಸಾರ ವೀಕ್ಷಿಸಲು ಅನುವು ಮಾಡಿಕೊಡಲಾಯಿತು. ಫಲಾನುಭವಿ ಮಹಿಳೆಯರು ತಮ್ಮ ನಿವಾಸದ ಸಮೀಪದಲ್ಲಿ ಅಳವಡಿಸಿದ್ದ ಪರದೆಗಳಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ವೀಕ್ಷಿಸಿ ಸಂಭ್ರಮಿಸಿದರು. ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿರುವ ಕೆಲ ಫಲಾನುಭವಿಗಳಿಗೆ ಮೈಸೂರಿನ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು, ಅಧಿಕಾರಿಗಳ ಜತೆಗೆ ಈ ಕುರಿತು ಆನ್‌ಲೈನ್‌ನಲ್ಲಿ ಮಾತನಾಡಲು ಅವಕಾಶ ಕಲ್ಪಿಸಿರುವುದು ವಿಶೇಷವಾಗಿತ್ತು.
ಯೋಜನೆಯಡಿ ಬೆಂಗಳೂರು ನಗರದಲ್ಲಿ ಈಗಾಗಲೇ ಅಂದಾಜು 6.16 ಲಕ್ಷ ಫಲಾನುಭವಿಗಳು ಹೆಸರು ನೊಂದಾಯಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮೈಸೂರಿನಲ್ಲಿ ಯೋಜನೆಗೆ ಚಾಲನೆ ನೀಡಿತ್ತು. ಇದೇ ವೇಳೆ ರಾಜ್ಯದ 11 ಸಾವಿರ ಸ್ಥಳಗಳಲ್ಲಿ ವರ್ಚುವಲ್ ವೀಡಿಯೋ ಮೂಲಕ ಏಕಕಾಲಕ್ಕೆ ಚಾಲನೆ ಸಿಕ್ಕಿತ್ತು. ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ, ಡಾ.ಹರೀಶ್ ಕುಮಾರ್, ಆರ್.ಎಲ್.ದೀಪಕ್, ದಕ್ಷಿಣ ವಲಯ ಜಂಟಿ ಆಯುಕ್ತ ಡಾ.ಕೆ.ಜಗದೀಶ್ ನಾಯ್ಕ, ಗೃಹಲಕ್ಷ್ಮಿ ಯೋಜನೆಯ ನೋಡಲ್ ಅಧಿಕಾರಿ ಲಕ್ಷ್ಮಿದೇವಿ ಮತ್ತಿತರರಿದ್ದರು.
ಮಹಿಳೆಯರು ಖುಷಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ಟೌನ್‌ಹಾಲ್‌ನಲ್ಲಿ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನೂರಾರು ಮಹಿಳೆಯರು ಎದ್ದು ನಿಂತು ಜೋರಾಗಿ ಕೂಗಿ ಸಂಭ್ರಮಿಸಿದರು. ಬ್ಯಾಂಕ್ ಖಾತೆಗೆ ಜಮೆ ಆದ 2 ಸಾವಿರ ರೂ.ನ ಮೊಬೈಲ್ ಸಂದೇಶವನ್ನು ಆಪ್ತರಿಗೆ ತೋರಿಸಿ ನಗೆಬೀರಿದರು. ಟೌನ್‌ಹಾಲ್‌ನಲ್ಲಿ ನಡೆದ ಸಮಾರಂಭದ ಭಾಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು. 6 ಮಂದಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.