

ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ತಾಲೂಕಿನ ತೆರಕಣಾಂಬಿ ಗ್ರಾಮದ ಎನ್.ವಿಶ್ವನಾಥ್ ತಮ್ಮ ಜಮೀನಿನಲ್ಲಿ ಅಲಂಕಾರಿಕ ಪುಷ್ಪಗಳಾದ ಸೂರ್ಯಕಾಂತಿ ಹಾಗೂ ಸುಗಂಧರಾಜ ಜಾತಿಯ ಟ್ಯೂಬ್ ರೋಸ್ ಬೆಳೆದು ಬೆಂಗಳೂರಿನ ಮಾರುಕಟ್ಟೆಗೆ ಸರಬರಾಜು ಮಾಡುವ ಮೂಲಕ ಇತರ ಕೃಷಿ ಉತ್ಪನ್ನಗಳಿಗಿಂತ ಹೆಚ್ಚಿನ ಲಾಭಗಳಿಸುತ್ತಿದ್ದಾರೆ.
ಬೆಳೆ ಬೆಳೆಯಲು ಸೂಕ್ತವಾದ ಮಾರ್ಗದರ್ಶನ ಹಾಗೂ ಹತ್ತಿರದಲ್ಲಿ ಮಾರುಕಟ್ಟೆ ಸೌಲಭ್ಯಗಳು ಇಲ್ಲದಿದ್ದರೂ ಸ್ವಂತ ಅನುಭವದಿಂದ ಅಲಂಕಾರಿಕ ಹೂವುಗಳನ್ನು ಬೆಳೆದು ಲಾಭಗಳಿಸುತ್ತಿದ್ದಾರೆ.
ತಾಲೂಕಿನಲ್ಲಿ ಅತಿಹೆಚ್ಚಿನ ರೈತರು ತಮ್ಮ ಜಮೀನುಗಳಲ್ಲಿ ನಾನಾ ರೀತಿಯ ತರಕಾರಿ ಬೆಳೆಯುತ್ತಿದ್ದಾರೆ. ಆದರೆ, ಪ್ರತಿವರ್ಷ ಗೊಬ್ಬರ, ಕ್ರಿಮಿನಾಶಕಗಳ ಅಧಿಕ ಬಳಕೆಯಿಂದ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಲೆ ದೊರಕದೆ ತುಂಬ ನಷ್ಟ ಅನುಭವಿಸುವಂತಾಗಿದೆ. ಕೆಲವೊಮ್ಮೆ ಅತ್ಯಧಿಕ ಬೆಲೆಗೆ ಮಾರಾಟವಾಗುವ ತರಕಾರಿಗಳು ಕೇಳುವವರೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ್ ತಮ್ಮ ಜಮೀನಿನಲ್ಲಿ ಸೂರ್ಯಕಾಂತಿ ಹಾಗೂ ಟ್ಯೂಬ್ ರೋಸ್ ಬೆಳೆದು ಬೆಂಗಳೂರಿಗೆ ಸರಬರಾಜು ಮಾಡುವ ಮೂಲಕ ಹೊಸ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ.
ಗ್ರಾಮದ ಎನ್.ವಿಶ್ವನಾಥ್ ಹುತ್ತೂರು ಸಮೀಪವಿರುವ ತಮ್ಮ 20 ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಮ್ಮ ಸಂಬಂಧಿಕರೊಬ್ಬರ ಸಲಹೆ ಮೇರೆಗೆ ಸೂರ್ಯಕಾಂತಿ ಹಾಗೂ ಟ್ಯೂಬ್ ರೋಸ್ ಬೆಳೆಯುತ್ತಿದ್ದಾರೆ. ನೋಡಲು ಥೇಟ್ ಸೂರ್ಯಕಾಂತಿಯಂತೆಯೇ ಇರುವ ಹೂವನ್ನು ಗೃಹ ಪ್ರವೇಶ, ಸ್ವಾಗತ ಕಮಾನುಗಳ ನಿರ್ಮಾಣ, ವೇದಿಕೆ ಕಾರ್ಯಕ್ರಮಗಳು, ಕಲ್ಯಾಣ ಮಂಟಪಗಳಲ್ಲಿ ಅಲಂಕಾರಕ್ಕೆ ಬಳಸಲಾಗುತ್ತದೆ. ಇದರಿಂದ ಬೆಂಗಳೂರಿನಲ್ಲಿ ಸದಾಕಾಲವೂ ಈ ಹೂವುಗಳಿಗೆ ತುಂಬ ಬೇಡಿಕೆಯಿದೆ.
ತಮಗೆ ಇದನ್ನು ಪರಿಚಯಿಸಿದ ಸಂಬಂಧಿಕರೇ ಬೆಂಗಳೂರಿನಲ್ಲಿ ಅಲಂಕಾರಿಕ ಹೂವುಗಳ ಮಾರಾಟ ಮಾಡುವುದರಿಂದ ವಿಶ್ವನಾಥ್ ಅವರ ಉತ್ಪನ್ನಗಳಿಗೆ ಸದಾ ಕಾಲವೂ ಮಾರುಕಟ್ಟೆ ದೊರಕುತ್ತಿದೆ. ಅವರ ಸಲಹೆಯಂತೆ ಹೂವುಗಳನ್ನು ಕಟಾವು ಮಾಡಿ ಪ್ಯಾಕ್ ಮಾಡಿ ಬಸ್ಸುಗಳಲ್ಲಿ ಬೆಂಗಳೂರಿಗೆ ಕಳಿಸುವ ಮೂಲಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಎರಡು ತಿಂಗಳ ಬೆಳೆ ಸೂರ್ಯಕಾಂತಿ
ಸೂರ್ಯಕಾಂತಿ 2 ತಿಂಗಳ ಬೆಳೆಯಾಗಿದೆ. ಬಿತ್ತನೆ ಮಾಡಿದ ಒಂದೂವರೆ ತಿಂಗಳ ನಂತರ ಹೂ ಬಿಡುವ ಈ ಬೆಳೆಯನ್ನು ಹೂವು ಅರೆ ಬಿರಿದಾಗಲೇ ಕಟಾವು ಮಾಡಲಾಗುತ್ತದೆ. ಇದು ಒಂದೇ ಬಾರಿಗೆ ಕಟಾವು ಆಗುವುದರಿಂದ ಇದರ ನಿರಂತರ ಉತ್ಪಾದನೆಗೆ ಬೇರೆ ಬೇರೆ 5 ಬ್ಯಾಚುಗಳಲ್ಲಿ ಬಿತ್ತನೆ ಮಾಡಬೇಕಾಗುತ್ತದೆ.
ಅರಳಿದ ಹೂವು ತನ್ನ ಪ್ರಖರತೆಯಿಂದ ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಆದರೆ, ಸಕಾಲದಲ್ಲಿ ಕಟಾವು ಮಾಡದೆ ಸ್ವಲ್ಪ ವಿಳಂಬ ಮಾಡಿದರೂ ಬೆಲೆ ಕಳೆದುಕೊಳ್ಳುತ್ತದೆ. ಕಟಾವು ಮಾಡಿದ ಹೂವುಗಳನ್ನು ಪ್ಲಾಸ್ಟಿಕ್ ಬಳಸಿ ಪ್ಯಾಕ್ ಮಾಡಿ ಪ್ರತಿ 5 ಹೂವುಗಳ ಬೊಕ್ಕೆ ಸಿದ್ಧಪಡಿಸಿ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಹೂವುಗಳ ಪೂರೈಕೆ ಕಡಿಮೆಯಿದ್ದಷ್ಟೂ ಅವುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುತ್ತಿದೆ.
ಟ್ಯೂಬ್ ರೋಸ್:
ಇದು ಉದ್ದನೆಯ ಕಡ್ಡಿಗಳ ಜತೆ ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಸುಗಂಧರಾಜ ಹೂವಿನಂತೆ ತನ್ನ ಸುವಾಸನೆಯಿಂದ ಜನರನ್ನು ಆಕರ್ಷಿಸುತ್ತದೆ. ವೇದಿಕೆಗಳು, ರಿಸೆಪ್ಷನ್ ಬ್ಯಾಕ್‌ಗ್ರೌಂಡ್ ಜತೆಗೆ ಇದನ್ನು ಹೂಕುಂದಗಳಲ್ಲಿ ಇಡಲಾಗುತ್ತದೆ. ಎಂಟು ತಿಂಗಳ ನಂತರ ಕಟಾವಿಗೆ ಬರುವ ಈ ಹೂವನ್ನು ಮುಂದಿನ 8 ತಿಂಗಳವರೆಗೂ ಕಟಾವು ಮಾಡಲಾಗುತ್ತದೆ. ಒಮ್ಮೆ ಕಟಾವು ಮಾಡಿದ ಹೂವನ್ನು ಮನೆಗಳು ಹಾಗೂ ಕಚೇರಿಗಳಲ್ಲಿ ಇಡಲಾಗುತ್ತದೆ. ಈ ಹೂವು ಒಂದು ವಾರದವರೆಗೂ ನಳನಳಿಸುತ್ತದೆ.ಲ್ಲಿ ವಿಶ್ವನಾಥ್ ಅವರ ಜಮೀನಿನಲ್ಲಿ ಬೆಳೆದಿರುವ ಸೂರ್ಯಕಾಂತಿ ಹಾಗೂ ಟ್ಯೂಬ್ ರೋಸ್