

ಆಲೂರು: ಪರಿಸರ ಸಮತೋಲನ ಕಾಪಾಡಲು ಹೆಚ್ಚು ಸಸಿಗಳನ್ನು ನೆಡಬೇಕು ಎಂದು ವಿಶ್ವೇಶ್ವರಯ್ಯ ಐಟಿಐ ಕಾಲೇಜು ಪ್ರಾಂಶುಪಾಲ ನಾಗಭೂಷಣ್ ಹೇಳಿದರು.
ಪಟ್ಟಣದ ವಿಶ್ವೇಶ್ವರಯ್ಯ ಐಟಿಐ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾಯು, ಶಬ್ದಮಾಲಿನ್ಯದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರ ಪರಿಣಾಮವನ್ನು ಎಲ್ಲರೂ ಅನುಭವಿಸುತ್ತಿದ್ದೇವೆ. ಸಾವಿರಾರು ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಬೇಕು. ಸಾಲುಮರದ ತಿಮ್ಮಕ್ಕ ಅವರ ಆದರ್ಶ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕಿ ಪೂರ್ಣಿಮಾ ಮಾತನಾಡಿ, ಅರಣ್ಯ ನಾಶವಾಗುತ್ತಿರುವುದರಿಂದಲೇ ಕಾಡು ಪ್ರಾಣಿಗಳು ನಾಡಿಗೆ ಧಾವಿಸುತ್ತಿವೆ. ಪರಿಸರ ಮಾಲಿನ್ಯದಿಂದ ಪಕ್ಷಿ, ಪ್ರಾಣಿಗಳ ಸಂತತಿ ನಶಿಸುತ್ತಿದೆ. ಗಿಡಗಳನ್ನು ಹೆಚ್ಚು ಬೆಳೆಸುವುದರಿಂದ ಕಾಡು ಉಳಿಯುತ್ತದೆ ಎಂದರು.
ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಕುರಿತು ಬೀದಿ ನಾಟಕ ಪ್ರದರ್ಶನ ನೀಡಿದರು. ಪರಿಸರ ಪ್ರತಿಜ್ಞಾವಿಧಿ ಬೋಧಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಕಾಲೇಜಿನ ಶಿಕ್ಷಣ ಸಂಯೋಜಕ ಎಸ್ತ, ಬೋಧಕರಾದ ರಾಮಚಂದ್ರ, ದೀಪ್ತಿ, ಭೂಮಿಕಾ, ರೋಹಿಣಿ ಹಾಜರಿದ್ದರು.