

ಅರಣ್ಯ ಇಲಾಖೆಗೆ ತಲೆನೋವು ನಾಗರಿಕರು, ರೈತರಿಗೆ ಆತಂಕ
ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾಡುಪ್ರಾಣಿಗಳ ಉಪಟಳ
ವಿಭೂತಿಕೆರೆ ಶಿವಲಿಂಗಯ್ಯ. ರಾಮನಗರ
ಸಣ್ಣ ಗುಡ್ಡ, ಬೆಟ್ಟಗಳಲ್ಲೂ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಗ್ರಾಮಗಳತ್ತ ಮುಖ ಮಾಡುತ್ತಿವೆ. ದಿನೇದಿನೆ ಚಿರತೆ ಸಂತತಿ ಹೆಚ್ಚುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವು ತಂದರೆ, ರೈತರು ಕೃಷಿ ಕಾರ್ಯ ಕೈಗೊಳ್ಳಲು ಭಯ ಬೀಳುವಂತಾಗಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಆನೆ ಮತ್ತು ಚಿರತೆಗಳ ಉಪಟಳ ಹೆಚ್ಚಿದೆ. ಇವೆರಡೂ ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿವೆ. ಇದರ ನಡುವೆ ಚಿರತೆ ಸಂತತಿ ಹೆಚ್ಚುತ್ತಿರುವುದು, ಜಮೀನಿನ ಬಳಿ ಮನುಷ್ಯರ ಮೇಲೆ ದಾಳಿ ನಡೆಸುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಹಗಲಿನಲ್ಲಿಯೇ ಜಮೀನಿನ ಬಳಿ ಪ್ರತ್ಯಕ್ಷವಾಗುವ ಚಿರತೆಗಳಿಂದ ರೈತರು ಕೃಷಿ ಚಟುವಟಿಕೆ ನಡೆಸಲು, ಜಾನುವಾರು ಮೇಯಿಸಲು ಹೆದರುವಂತಾಗಿದೆ. ಕುರಿ ಮೇಕೆ ಮೇಯಿಸಲು ಜಮೀನಿನ ಬಳಿ ಹೋದಾಗ ಚಿರತೆಗಳು ದಾಳಿ ನಡೆಸಿ ಕುರಿ ಮೇಕೆ ಹೊತ್ತೊಯ್ಯುವ ಚಿರತೆಗಳು ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುವುದರ ಜತೆಗೆ ಜತೆಯಲ್ಲಿರುವ ಮೇಲೆ ಎರಗುವ ಪ್ರಸಂಗಗಳು ಕಂಡುಬರುತ್ತಿವೆ.
ಈ ಹಿಂದೆ ತೆಂಗಿನಕಲ್ಲು, ಹಂದಿಗೊಂದಿ, ಹುಲ್ತಾರ್, ಚಿಕ್ಕಮಣ್ಣುಗುಡ್ಡೆ ದೊಡ್ಡ ಅರಣ್ಯ ಪ್ರದೇಶಕ್ಕೆ ಸೀಮಿತವಾಗಿದ್ದ ಚಿರತೆಗಳು ಈಗ ಸಣ್ಣ ಗುಡ್ಡ ಪ್ರದೇಶಗಳನ್ನೂ ವಾಸಸ್ಥಾನ ಮಾಡಿಕೊಂಡು ಸಂತತಿ ಹೆಚ್ಚಿಸಿಕೊಂಡಿವೆ. ಚಿರತೆ ಉಪಟಳವಿದ್ದ ಗ್ರಾಮಗಳ ಬಳಿ ಬೋನು ಇಟ್ಟು ಚಿರತೆಗಳನ್ನು ಆಗಾಗ ಸೆರೆ ಹಿಡಿದು ದೂರ ಪ್ರದೇಶಕ್ಕೆ ಬಿಟ್ಟು ಬರಲಾಗುತ್ತಿದೆ. ಆದರೂ ಚಿರತೆಗಳು ಕಡಿಮೆಯಾಗದೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ತಲೆಬಿಸಿಗೆ ಕಾರಣವಾಗಿದೆ.
ಅರಣ್ಯ ಇಲಾಖೆ ಎಚ್ಚೆತ್ತು ಕಾಡುಪ್ರಾಣಿಗಳ ಉಪಟಳವಿರುವ ಸ್ಥಳಗಳಲ್ಲಿ ಹೆಚ್ಚು ಬೋನು ಇಟ್ಟು ಚಿರತೆಗಳನ್ನು ಸೆರೆ ಹಿಡಿದು ದೂರದ ಅರಣ್ಯಕ್ಕೆ ಬಿಟ್ಟರೆ ಚಿರತೆ ಕಾಟ ತಪ್ಪುವುದರ ಜತೆಗೆ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಜಾಲಮಂಗಲ, ದೊಡ್ಡಗಂಗವಾಡಿ, ಲಕ್ಷ್ಮೀಪುರ, ಕೈಲಾಂಚ ಹೋಬಳಿಯ ಹುಲಿಕೆರೆ, ಚಿಕ್ಕೇನಹಳ್ಳಿ, ಅಂಜನಾಪುರ, ವಿಭೂತಿಕೆರೆ, ಬನ್ನಿಕುಪ್ಪೆ, ಕವಣಾಪುರ, ಲಕ್ಕಪ್ಪನಹಳ್ಳಿ, ಬಿಡದಿ ಹೋಬಳಿಯ ಕರಿಯಪ್ಪನದೊಡ್ಡಿ, ಯೋಗವನಬೆಟ್ಟ, ಬನ್ನಿಗಿರಿ, ಕಸಬಾ ಹೋಬಳಿಯ ಲಿಂಗೇಗೌಡನದೊಡ್ಡಿ, ಕೆಂಜಿಗರಹಳ್ಳಿ, ಕಗ್ಗಲಹಳ್ಳಿ, ಕರಡಿದೊಡ್ಡಿ, ಕೇತೋಹಳ್ಳಿ, ಬಸವನಪುರ ಭಾಗಗಳಲ್ಲಿ ಚಿರತೆ ಕಾಟ ಹೆಚ್ಚಿದೆ.
ನಾಲ್ಕು ದಿನದ ಹಿಂದಷ್ಟೇ ಕೆಂಜಿಗರಹಳ್ಳಿಯ ರೈತ ಗಂಗಯ್ಯ ಎಂಬುವರು ಜಮೀನಿನ ಬಳಿ ಕುರಿ ಮೇಯಿಸುತ್ತಿದ್ದಾಗ ದಾಳಿ ನಡೆಸಿರುವ ಚಿರತೆ ಎರಡು ಕುರಿಗಳನ್ನು ಸಾಯಿಸಿದೆ. ಜತೆಗೆ ಗಂಗಯ್ಯ ಅವರ ಮೇಲೂ ದಾಳಿ ನಡೆಸಿದ್ದರಿಂದ ಮುಖದ ಮೇಲೆ ತರಚಿದ ಗಾಯಗಳಾಗಿದೆ. ಅರಣ್ಯ ಇಲಾಖೆ ಗಂಗಯ್ಯ ಅವರಿಗೆ ಚಿಕಿತ್ಸೆ ಕೊಡಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಹುಲಿಕೆರೆ ಗ್ರಾಮದಲ್ಲಿ ದೇವರಾಜು ಎಂಬುವರ ಕೋಳಿ ಸಾಕಣೆ ಶೆಡ್‌ಗೆ ಗುರುವಾರ ರಾತ್ರಿ ನುಗ್ಗಿರುವ ಚಿರತೆಗಳು ಸುಮಾರು 180ಕ್ಕೂ ಹೆಚ್ಚಿನ ಕೋಳಿಗಳ ರಕ್ತಹೀರಿ ಸಾಯಿಸಿರುವುದಲ್ಲದೆ ಕೆಲವನ್ನು ತಿಂದುಹಾಕಿವೆ.
ಸಿಸಿ ಕ್ಯಾಮೆರಾ
ಸಾಕು ಪ್ರಾಣಿಗಳನ್ನು ತಿನ್ನಲು ಒಂಟಿ ಮನೆ, ತೋಟದ ಮನೆ, ಗ್ರಾಮದ ಮನೆಗಳ ಬಳಿ ಎಡತಾಕುವ ಚಿರತೆಗಳು ಪ್ರಾಣಿಗಳನ್ನು ಬೇಟೆಯಾಡಿ ಹೊತ್ತೊಯ್ಯುತ್ತಿವೆ. ಇಂಥ ದೃಶ್ಯಗಳು ತೋಟ, ಮನೆಗಳ ಬಳಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿವೆ.
ಕೆ.ಪಿ.ದೊಡ್ಡಿ ಲಾಲಾನಾಯಕನದೊಡ್ಡಿ ಗ್ರಾಮದ ಬಳಿಯ ಅಂಕನಹಳ್ಳಿ ರಸ್ತೆ ಪಕ್ಕದ ಗುಡ್ಡದಲ್ಲಿ ಐದು ಚಿರತೆಗಳು ಕಂಡು ಬಂದಿದ್ದು ಹಗಲಿನ ವೇಳೆಯಲ್ಲಿ ಗುಡ್ಡದ ಕಲ್ಲಿನ ಬಂಡೆ ಮೇಲೆ ತಿರುಗಾಡುತ್ತಾ ಜನರಿಗೆ ಕಾಣಿಸಿಕೊಳ್ಳುತ್ತಿವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ಗ್ರಾಮದ ಬಳಿ ಬೋನು ಇಟ್ಟು ನಾಲ್ಕು ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ರಾಮನಗರ ವಲಯ ಅರಣ್ಯದಲ್ಲಿ 5 ಬೋನು ಇವೆ. ಆದರೆ, ಇವುಗಳನ್ನು ಒಂದು ಕಡೆ ಇಟ್ಟರೆ ಮತ್ತೊಂದು ಕಡೆಗೆ ಕೊರತೆಯಾಗುತ್ತಿದೆ. ಹಾಗಾಗಿ ಇನ್ನೂ 10ರಿಂದ 15 ಬೋನುಗಳ ಅವಶ್ಯಕತೆ ಇದೆ ಎನ್ನಲಾಗಿದೆ.
ಅಂಜನಾಪುರ, ಚಿಕ್ಕೇನಹಳ್ಳಿ, ಬನ್ನಿಕುಪ್ಪೆ ರಸ್ತೆ, ಕನಕಪುರ ರಸ್ತೆ, ಜಾಲಮಂಗಲ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳು ಸಂಜೆ, ರಾತ್ರಿ ರಸ್ತೆ ದಾಟುವ ಸಮಯದಲ್ಲಿ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿವೆ. ಕಳೆದ ತಿಂಗಳಷ್ಟೇ ಬನ್ನಿಕುಪ್ಪೆ ಸುರೇಶ್ ಎಂಬುವರ ಮೇಲೆ ಎಗರಿ ಚಿರತೆ ಗಾಯಗೊಳಿಸಿದ್ದನ್ನು ಸ್ಮರಿಸಬಹುದಾಗಿದೆ.
ಆನೆ, ಚಿರತೆ ಕಾಟಕ್ಕೆ ಕಡಿವಾಣ ಹಾಕಲು ರೈತರ ದೂರಿಗೆ ಸ್ಪಂದಿಸಲು ಅರಣ್ಯ ಇಲಾಖೆಗೆ ವಾಹನದ ಅವಶ್ಯಕತೆ ಇದೆ. ಜತೆಗೆ ಅರಣ್ಯ ಇಲಾಖೆಗೆ ಆಂಬುಲೆನ್ಸ್ ಮಾದರಿ ತುರ್ತು ವಾಹನ ಬೇಕಿದೆ. ಸರ್ಕಾರ ರಾಮನಗರ ವಲಯಕ್ಕೆ ತುರ್ತು ವಾಹನ ನೀಡಿದರೆ ಅನುಕೂಲವಾಗುತ್ತದೆ.
ಎಂ.ಪಿ. ಮಹೇಶ್, ವಿಎಸ್ಸೆಸ್ಸೆನ್ ಅಧ್ಯಕ್ಷ, ಮೊಟ್ಟೆದೊಡ್ಡಿ
ಚಿರತೆ ಹೆಚ್ಚು ಕಂಡು ಬರುತ್ತಿದ್ದರೂ ಒಂದಷ್ಟು ಪ್ರದೇಶದಲ್ಲಿ ಮಾತ್ರ ಉಪಟಳವಿದೆ. ಚಿರತೆ ಉಪಟಳವಿರುವ ಸ್ಥಳಗಳಿಂದ ಸಾರ್ವಜನಿಕರಿಂದ ದೂರು ಬಂದ ಸಮಯದಲ್ಲೇ ಬೋನು ಇಟ್ಟು ಚಿರತೆ ಸೆರೆ ಹಿಡಿದು ದೂರದ ಅರಣ್ಯಕ್ಕೆ ಬಿಟ್ಟು ಬರಲಾಗುತ್ತಿದೆ. ಚಿರತೆ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದೆ.
ದಿನೇಶ್, ವಲಯ ಅರಣ್ಯಾಧಿಕಾರಿ, ರಾಮನಗರ.