ಫಲ ನೀಡದ ಬೋರ್ಡೋ ದ್ರಾವಣ! : ನಿರಂತರ ಮಳೆಗೆ ಕೊಳೆರೋಗ ಉಲ್ಬಣ : ಅಡಕೆ ಕೃಷಿಕರು ಅತಂತ್ರ

New Project
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಈ ವರ್ಷ ಅವಧಿಗಿಂತ ಮುಂಚೆಯೇ ಮಳೆ ಆರಂಭವಾಗಿ ಬಳಿಕ ಎಡೆಬಿಡದೆ ಒಂದೂವರೆ ತಿಂಗಳ ಕಾಲ ಸುರಿದ ಪರಿಣಾಮ ರೈತರು ವಾಣಿಜ್ಯ ಬೆಳೆಯಾಗಿ ಅವಲಂಬಿಸಿಕೊಂಡಿರುವ ಅಡಕೆಗೆ ಕೆಲವೆಡೆ ಕೊಳೆರೋಗ ಬಾಧಿಸಿದೆ. ಉರುವೆಯೊಂದಿಗೆ ಫಸಲಿಗೆ ಬರುವ ಹಂತದ ದೊಡ್ಡ ಅಡಕೆಗಳು ಮರದಿಂದ ಉದುರಿ ಬೀಳುತ್ತಿರುವುದು ಹಾಗೂ ಮಳೆ ಆರಂಭವಾದ ಬಳಿಕ ಅರಳಿದ ಹಿಂಗಾರಗಳೆಲ್ಲಾ ಕೊಳೆಯುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.

ಬಿಸಿಲಿನಿಂದ ಬಿಸಿಯೇರುವ ಮೇ ತಿಂಗಳಿನ ಮಧ್ಯದಿಂದಲೇ ಈ ವರ್ಷದ ಮಳೆಗಾಲ ಆರಂಭಗೊಂಡು ನಿರಂತರವಾಗಿ ಒಂದೂವರೆ ತಿಂಗಳ ಕಾಲ ಸುರಿದಿದೆ. ಬಿಸಿಲಿನ ತಾಪಕ್ಕೆ ಅಡಕೆ ಮರಗಳಿಗೆ ನೀರು ಕಡಿಮೆಯಾಗುವ ಸಮಯದಲ್ಲಿ ಉತ್ತಮ ಮಳೆಯಾದಾಗ ಕೆಲ ಭಾಗದಲ್ಲಿ ಕೃಷಿಕರು ಖುಷಿಪಟ್ಟಿದ್ದರು. ಆದರೆ ಅಕಾಲಿಕ ಮಳೆಯ ದುಷ್ಪರಿಣಾಮ ಈಗ ಕೃಷಿಕರನ್ನು ಕಾಡುತ್ತಿದೆ. ಬಂಟ್ವಾಳ ತಾಲೂಕಿನ ಕೆಲ ಭಾಗದ ಅಡಕೆ ತೋಟಗಳಲ್ಲಿ ಅಡಕೆ ಉದುರಿ ಬುಡ ಸೇರಿದೆ

ದ್ರಾವಣ ಸಿಂಪಡಣೆಗೆ ಬಿಸಿಲಿನ ಕೊರತೆ: ಅಡಕೆ ಉದುರುವ ರೋಗದಿಂದ ಫಸಲನ್ನು ರಕ್ಷಿಸಲು ರೈತರು ಬೋರ್ಡೋ ದ್ರಾವಣ ಸಿಂಪಡಿಸುವುದು ಸಾಮಾನ್ಯ. ಮೈಲುತುತ್ತು ಹಾಗೂ ಸುಣ್ಣ ಮಿಶ್ರಣದ ಬೋರ್ಡೋ ದ್ರಾವಣ ಸಿಂಪಡಿಸಬೇಕಾದರೆ ಬಿಸಿಲಿನ ಅಗತ್ಯವಿದೆ. ಆದರೆ ಈ ಸಾಲಿನಲ್ಲಿ ಮಳೆ ಆರಂಭವಾದ ಬಳಿಕ ಸರಿಯಾದ ಬಿಸಿಲು ಕಾಣಿಸದೆ ಹೆಚ್ಚಿನ ರೈತರಿಗೆ ಸಕಾಲದಲ್ಲಿ ಬೋರ್ಡೋ ದ್ರಾವಣ ಸಿಂಪಡಿಸಲು ಸಾಧ್ಯವಾಗಿಲ್ಲ. ಸ್ವಲ್ಪ ಬಿಸಿಲು ಬಂತೆಂದು ಬೋರ್ಡೋ ಸಿಂಪಡಿಸಿದರೆ ಸ್ವಲ್ಪ ಹೊತ್ತಿನಲ್ಲಿಯೇ ಕಾರ್ಮೋಡ ಕವಿದು ಮಳೆ ಸುರಿದು ಸಿಂಪಡಿಸಿದ ದ್ರಾವಣವೆಲ್ಲಾ ನೀರಿನಲ್ಲಿ ಹರಿದು ಹೋಗಿದೆ. ಸಕಾಲದಲ್ಲಿ ಕಾರ್ಮಿಕರು ಸಿಗದೆಯೂ ದೊಡ್ಡ ದೊಡ್ಡ ತೋಟಗಳಿಗೆ ಔಷಧ ಸಿಂಪಡಿಸಲು ಸಾಧ್ಯವಾಗದೆ ಅಡಕೆ ಉದುರಲಾರಂಭಿಸಿದೆ. ಕೊಳೆರೋಗ ವ್ಯಾಪಕವಾಗಿ ಹರಡಿದ್ದಲ್ಲಿ ಅದು ಫಸಲನ್ನು ಮಾತ್ರವಲ್ಲದೆ ಮರವನ್ನು ಆಪೋಶನಗೈಯ್ಯುವ ಸಾಧ್ಯತೆ ಇದೆ. ಇದು ಮತ್ತಷ್ಟು ಕೃಷಿಕರಿಗೆ ನಷ್ಟ ಉಂಟು ಮಾಡಲಿದೆ.

ಒಂದೂವರೆ ತಿಂಗಳಿನಿಂದ ರಾತ್ರಿ ಹಗಲು ಸುರಿದ ಮಳೆಯಿಂದಾಗಿ ಈ ಬಾರಿ ಹೆಚ್ಚಿನ ತೋಟಗಳಿಗೆ ಕೊಳೆರೋಗ ಬಾಧಿಸಿದೆ. ಅಡಕೆ ಈ ಭಾಗದ ರೈತರ ಮುಖ್ಯ ಬೆಳೆಯಾಗಿರುವುದರಿಂದ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ. ಬೋರ್ಡೋ ದ್ರಾವಣಕ್ಕೆ ಪರ್ಯಾಯವಾದ ಔಷಧದ ಸಂಶೋಧನೆಯಾಗದಿರುವುದು ದುರಂತ. ಗಂಗಾಧರ ಆಳ್ವ ಅನಂತಾಡಿ, ಕೃಷಿಕ ರೋಗ ನಿಯಂತ್ರಕ ದ್ರಾವಣ ಸಿಂಪಡಣೆ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಬೋರ್ಡೋ ದ್ರಾವಣ ಮಿಶ್ರಣವನ್ನು 1:1 ಮಾದರಿಯಲ್ಲೇ ನೀಡಬೇಕು. ಕೂಲಿ ಕಾರ್ಮಿಕರು ಕ್ಲಪ್ತ ಸಮಯಕ್ಕೆ ಸಿಗದೆ ಔಷಧ ಸಿಂಪಡೆಯಾಗದಿರುವುದು ಕೊಳೆರೋಗ ಹೆಚ್ಚಾಗಲು ಕಾರಣ. ಮನೋಹರ ಶೆಟ್ಟಿ ನಡಿಕಂಬಳಗುತ್ತು ರಾಜ್ಯ ಕಾರ್ಯದರ್ಶಿ, ರೈತ ಸಂಘ ಹಸಿರು ಸೇನೆ ಕ್ಷೇತ್ರ ಸಂಪರ್ಕದ ವೇಳೆ ಅಡಕೆ ತೋಟಗಳಲ್ಲಿ ಕೊಳೆರೋಗ ಇರುವುದು ಕಂಡುಬಂದಿಲ್ಲ. ಕೊಳೆರೋಗದ ಫಂಗಸ್ ಇದ್ದರೆ ಮಾತ್ರ ರೋಗ ಹರಡುತ್ತದೆ. ತಾಲೂಕಿನಲ್ಲಿ ಇಬ್ಬರು ಮಾತ್ರ ಕೊಳೆರೋಗದ ಬಗ್ಗೆ ಇಲಾಖೆಗೆ ವರದಿ ಮಾಡಿದ್ದಾರೆ. ಜೋ ಪ್ರದೀಪ್ ಡಿಸೋಜ ಹಿರಿಯ ನಿರ್ದೇಶಕ ತೋಟಗಾರಿಕಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net