

ಹಾವೇರಿ: ಕಳೆದ ಎರಡ್ಮೂರು ದಿನಗಳಿಂದ ನಿರ್ಬಂಧ ಹೇರಿರುವ ದೂರುಗಳು ಬರುತ್ತಿವೆ. ಜಿಲ್ಲೆಯಲ್ಲಿ ದಿನಸಿ ಅಂಗಡಿಗಳಿಗೆ ಯಾವುದೇ ಸಮಯದ ನಿರ್ಬಂಧವನ್ನು ಹೇರಿಲ್ಲ. ಈ ಕುರಿತು ದಿನಸಿ ಅಂಗಡಿಯವರಿಗೆ ಮಾಹಿತಿ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಎಸ್ಪಿ ಕೆ.ಜಿ. ದೇವರಾಜ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಅವರು, ಅಂಗಡಿಗಳ ಒಳಗೆ ಹಾಗೂ ಹೊರಗೆ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಬೇಕು. ತರಕಾರಿಯವರೂ ಮನೆಮನೆಗೆ ಹೋಗಿ ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶವಿದೆ. ದುಪ್ಪಟ್ಟು ದರಕ್ಕೆ ದಿನಸಿ, ತರಕಾರಿ ಮಾರಾಟ ಮಾಡಿದ ನಿರ್ದಿಷ್ಟ ಪ್ರಕರಣಗಳು ಕಂಡುಬಂದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೊಂದಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಲಾಕ್ಡೌನ್ ಅವಧಿಯನ್ನು ಏ. 20ರವರೆಗೆ ಮುಂದುವರಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಬೀದಿಯಲ್ಲಿ ಓಡಾಡುವುದನ್ನು ನಿಲ್ಲಿಸಿ ಮನೆಯಲ್ಲಿಯೇ ಉಳಿದು ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು. ವೈದ್ಯಕೀಯ ಕಾರಣ, ತುರ್ತು ಸಂದರ್ಭಗಳಲ್ಲಿ ವಿನಾಯಿತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ತೆರಳುವವರಿಗೆ ವಿನಾಯಿತಿ ನೀಡಲಾಗಿದೆ. ಸಾರ್ವಜನಿಕರಿಗೆ ವಿನಾಕಾರಣ ಕಿರುಕುಳ ನೀಡಿದರೆ ಕ್ರಮಕೈಗೊಳ್ಳುವುದಾಗಿ ಎಲ್ಲ ಪೊಲೀಸ್ ಸಿಬ್ಬಂದಿಗೆ ಕಟ್ಟಪ್ಪಣೆ ಮಾಡಲಾಗಿದೆ. ಕೆಲ ಗ್ರಾಮಗಳಲ್ಲಿ ಕಾಲಕಾಲಕ್ಕೆ ಬದಲಾಗುವ ನಿಯಮಗಳನ್ನು ತಿಳಿಯದೇ ಗ್ರಾಮಮಟ್ಟದಲ್ಲಿ ತೊಂದರೆಯಾಗಿರಬಹುದು. ಇಂದಿನಿಂದಲೇ ಹೋಮ್ಾರ್ಡ್ಗಳ ಜೊತೆಗೆ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ದೈನಂದಿನ ಬದುಕಿಗೆ ಕೆಲ ತೊಂದರೆಗಳು ಆಗಿರಬಹುದು. ಆದರೆ, ಕರೊನಾದಂತಹ ಮಾರಕ ರೋಗ ಸಮೂಹಕ್ಕೆ ಹರಡುವುದನ್ನು ತಪ್ಪಿಸಲು ಕೆಲಕಾಲ ನಿರ್ಬಂಧಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯ. ಎಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ ಸುದ್ದಿಗೋಷ್ಠಿಯಲ್ಲಿದ್ದರು.
219 ಜನ ಹೋಮ್ ಕ್ವಾರಂಟೈನ್: ಜಿಲ್ಲೆಯಲ್ಲಿ 219 ಜನ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಇವರ ಚಟುವಟಿಕೆ ಮೇಲೆ ನಿಗಾ ವಹಿಸಲು ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಕಾಲಕಾಲಕ್ಕೆ ಮನೆಗೆ ಭೇಟಿ ನೀಡಿ ಕ್ವಾರಂಟೈನ್ ವ್ಯಕ್ತಿಗಳ ಫೋಟೋ ತೆಗೆಯಲಾಗುತ್ತಿದೆ. ಲಾಕ್ಡೌನ್ ಆದ ಅವಧಿಯಿಂದ ಈವರೆಗೆ 12 ಅಬಕಾರಿ ಪ್ರಕರಣಗಳನ್ನು ಪತ್ತೆ ಮಾಡಿ 5.50 ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದರು.