ಹೊರಗೆ ದಿನಸಿ ಅಂಗಡಿ, ಒಳಗೆ ಕ್ಲಿನಿಕ್​!

Published on

ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ವೇಳೆ ಪತ್ತೆ | ಜಂಗಮಕೋಟೆಯಲ್ಲಿ ನಕಲಿ ವೈದ್ಯ ಕೇಂದ್ರಕ್ಕೆ ಬೀಗ

ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ

ತಾಲೂಕಿನ ಜಂಗಮಕೋಟೆ ವೃತ್ತದ ಪೆಟ್ರೋಲ್​ ಬಂಕ್​ ಬಳಿಯ ಸ್ಟೋರ್​ವೊಂದರಲ್ಲಿ ದಿನಸಿ ಮಾರುವ ಜತೆಗೆ ಕ್ಲಿನಿಕ್​ ನಡೆಸುತ್ತಿದ್ದ ಆರೋಪದ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್​ಕುಮಾರ್​, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮತ್ತು ಆರೋಗ್ಯ ನಿರೀಕ್ಷಕ ದೇವರಾಜ್​ ಜು.28ರಂದು ದಾಳಿ ನಡೆಸಿ, ಕ್ಲಿನಿಕ್​ಗೆ ಬೀಗ ಜಡಿದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಖಚಿತ ಮಾಹಿತಿ ಮೇರೆಗೆ ಜು.28ರಂದು ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದು, ಅಂಗಡಿ ಒಳಗಿನ ಕೋಣೆಗೆ ಬೀಗ ಹಾಕಲಾಗಿತ್ತು. ಪೊಲೀಸ್​ ಸಿಬ್ಬಂದಿ ಬೀಗ ತೆರೆದಾಗ ಔಷಧದ ಅಂಗಡಿಯೇ ಇತ್ತು. ಅಲ್ಲದೆ ರೋಗಿಗೆ ಚಿಕಿತ್ಸೆ ನೀಡುವ ಎಲ್ಲ ಸಲಕರಣೆಗಳೂ ಕೋಣೆಯಲ್ಲಿದ್ದವು. ಕೂಡಲೇ ಸಹಾಯಕ ಔಷಧ ನಿಯಂತ್ರಕಿ ಸವಿತಾ ಸಹ ಸ್ಥಳಕ್ಕೆ ಬಂದು ಪರಿವೀಸಿದ ಬಳಿಕ ಆಸ್ಪತ್ರೆಗೆ ಬೀಗ ಹಾಕಲಾಗಿದೆ.

ಜಿಲ್ಲಾಧಿಕಾರಿಗೆ ವರದಿ, ಗ್ರಾಮಾಂತರ ಠಾಣೆಯಲ್ಲಿ ದೂರು

ಭಾಗ್ಯಮ್ಮ ಎನ್ನುವವರು ಎಎನ್​ಎಂ ತರಬೇತಿ ಪಡೆದು ಕ್ಲಿನಿಕ್​ ನಡೆಸುತ್ತಿದ್ದರು ಎಂದು ತಿಳಿದುಬಂದಿದ್ದು, ಹೊರಗಡೆಯಿಂದ ನೋಡಿದಾಗ ದಿನನಿತ್ಯ ಬಳಕೆಯ ವಸ್ತುಗಳನ್ನು ಮಾರುವ ಅಂಗಡಿಯಂತೆ ಕಾಣಿಸುತ್ತಿತ್ತಾದರೂ, ಒಳಗೆ ಎಲ್ಲ ರೀತಿಯ ಔಷಧ, ಚುಚ್ಚುಮದ್ದು, ಯಂತ್ರೋಪಕರಣಗಳಿದ್ದವು. ಭಾಗ್ಯಮ್ಮ ಅವರಿಗೆ ಫೋನ್​ ಮಾಡಿದರೂ ಬರಲಿಲ್ಲ. ಆದರೆ ಬುಧವಾರ ಇಲಾಖೆಗೆ ಬಂದು ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ. ಈಗಾಗಲೇ ಅಂಗಡಿಯನ್ನು ಸೀಜ್​ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಗ್ರಾಮಾಂತರ ಪೊಲೀಸ್​ ಠಾಣೆಯಲ್ಲೂ ದೂರು ದಾಖಲಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಬುಧವಾರ ತಿಳಿಸಿದರು.

ಇತ್ತೀಚೆಗೆ ನಕಲಿ ಕ್ಲಿನಿಕ್​ಗಳ ಹಾವಳಿ ಹೆಚ್ಚಾಗುತ್ತಿದೆ. ಸೂಕ್ತ ವಿದ್ಯಾರ್ಹತೆ, ಕೆಪಿಎಂಎ ಪ್ರಮಾಣಪತ್ರ ಇಲ್ಲದವರಿಗೆ ಅಂಗಡಿಯನ್ನು ಬಾಡಿಗೆ ಕೊಡುವ ಮಾಲೀಕರ ಮೇಲೂ ಕ್ರಮ ಕೈಗೊಳ್ಳಲಾಗುವುದು

| ಡಾ.ಮಹೇಶ್​ ಕುಮಾರ್​ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net