ಬಾರದ ಗೃಹಲಕ್ಷ್ಮೀ ಯೋಜನೆ ಹಣ

ಬಾರದ ಗೃಹಲಕ್ಷ್ಮೀ ಯೋಜನೆ ಹಣ
Published on

ಡಿ.ಪಿ.ಮಹೇಶ್ ಯಳಂದೂರು

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಮಹಿಳೆಯರಿಗೆ ಎರಡು ಸಾವಿರ ರೂ. ಸಹಾಯಧನ ನೀಡುವ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ 1ವರ್ಷ ಕಳೆದರೂ ತಾಲೂಕಿನ 50 ಕ್ಕೂ ಹೆಚ್ಚು ಮಹಿಳೆಯರಿಗೆ ಹಣ ಪಾವತಿಯಾಗದೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳು ಚಾಮರಾಜನಗರ ಜಿಲ್ಲೆಯಲ್ಲಿಯೇ ಹೆಚ್ಚಿದ್ದು, ಯಳಂದೂರು ತಾಲೂಕಿನ ಪರಿಶಿಷ್ಟ ಜಾತಿಯ-7615, ಪರಿಶಿಷ್ಟ ಪಂಗಡದ-3588, ಒಬಿಸಿ-7541, ಇತರೆ 3108 ಸೇರಿದಂತೆ ಒಟ್ಟು 21852 ಕುಟುಂಬದ ಮಹಿಳೆಯರು ಯೋಜನೆಯ ಅನುಕೂಲ ಪಡೆಯುತ್ತಿದ್ದಾರೆ. ಆದರೆ, 2024ರ ಜನವರಿಯಲ್ಲೇ ಅರ್ಜಿ ಸಲ್ಲಿಸಿದ್ದ ತಾಲೂಕಿನ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಒಂದು ಕಂತಿನ ಹಣವು ಬಾರದಿರುವುದು ವಿಪರ್ಯಾಸವಾಗಿದೆ.

ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಯೋಜನೆಯ ಉದ್ದೇಶವಾಗಿದ್ದು, ಮಹಿಳಾ ಕೂಲಿ ಕಾರ್ಮಿಕರು, ಬಡವರ್ಗದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಆಸರೆಯಾಗಿದೆ. ಹಲವೆಡೆ ಈ ಯೋಜನೆಯ ಹಣ ಮಕ್ಕಳ ಶಾಲಾ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ, ಗೃಹಪಯೋಗಿ ವಸ್ತುಗಳ ಖರೀದಿ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗಿದೆ. ಆದರೆ, ತಾಲೂಕಿನ 50ಕ್ಕೂ ಹೆಚ್ಚು ಮಹಿಳೆಯರಿಗೆ ಈ ಯೋಜನೆ ಫಲದೊರಕದಂತಾಗಿದೆ.

ಗ್ಯಾರಂಟಿ ಯೋಜನೆ ಸಮಿತಿ ಕೆಲಸ ಮಾಡುತ್ತಿಲ್ಲ: 5 ಗ್ಯಾರಂಟಿ ಯೋಜನೆಗಳು ಫಲಾನುಭವಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳನ್ನು ನೇಮಿಸಲಾಗಿದೆ. ಈ ಸಮಿತಿ ಸದಸ್ಯರಿಗೆ ಪ್ರತಿ ತಿಂಗಳು ವೇತನವನ್ನು ಸಹ ನೀಡಲಾಗುತ್ತಿದೆ. ಆದರೆ, ಅವರು ಗ್ರಾಮೀಣ ಭಾಗದಲ್ಲಿ 5 ಯೋಜನೆಗಳು ಜನರಿಗೆ ಸಮರ್ಪವಾಗಿ ತಲುಪುತ್ತಿರುವ ಬಗ್ಗೆ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ಮಾಡಿ ಜನರ ಯೋಜನೆಗಳ ಬಗ್ಗೆ ಪ್ರಚಾರ ಪಡಿಸುತ್ತಿಲ್ಲ. ಬಾರಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ, ಸಮಾರಂಭಗಳಿಗೆ ಭಾಗವಹಿಸಿ ಬರುತ್ತಿದ್ದಾರೆ ಗ್ರಾಮೀಣ ಭಾಗದಲ್ಲಿ ಯಾವ ಸಭೆಗಳನ್ನು ಮಾಡಿ ಸಮಸ್ಯೆಯನ್ನು ಬಗ್ಗೆಹರಿಸಿಲ್ಲ ಎಂಬುವ ಆರೋಪ ಕೇಳಿ ಬರುತ್ತಿದೆ.

ತಾಂತ್ರಿಕ ದೋಷ: 2024ರ ಜನವರಿಯಲ್ಲಿ ಅರ್ಜಿ ಸಲ್ಲಿಸಿರುವ ತಾಲೂಕಿನ 50 ಕ್ಕೂ ಹೆಚ್ಚು ಮಹಿಳೆಯರಿಗೆ ಒಂದು ಕಂತಿನ ಹಣವೂ ಪಾವತಿಯಾಗದೇ ಇರುವ ಬಗ್ಗೆ ಸಿಡಿಪಿಒ ಇಲಾಖೆ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯಿಂದಾಗಿ ಹಣತಲುಪಿಲ್ಲ ಎಂಬ ಕಾರಣ ನೀಡುತ್ತಾರೆ. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಗೃಹಲಕ್ಷ್ಮೀ ತಾಂತ್ರಿಕ ವಿಭಾಗದ ವಾಟ್ಸಪ್ ಗ್ರೂಪ್‌ಗೆ ಮಾಹಿತಿ ನೀಡಲಾಗಿದ್ದರೂ, ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ. ಈ ಬಗ್ಗೆ ಮಹಿಳೆಯರು, ಹೊನ್ನೂರು, ಕೆಸ್ತೂರು, ಬಿಳಿಗಿರಿರಂಗನಬೆಟ್ಟ, ಯರಗಂಬಳ್ಳಿ ಸೇರಿದಂತೆ ಯಳಂದೂರು ಪಟ್ಟಣಕ್ಕೆ ನಿತ್ಯ ಅಲೆಯುತ್ತಿದ್ದಾರೆ. ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net