ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು

oppo_2
ಅಜ್ಜೀಪುರ- ರಾಮಾಪುರ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು. ಗುರುಮಲ್ಲಪ್ಪ, ರುದ್ರನಾಯ್ಕ, ಚಿನ್ನಣ್ಣ, ಮಂಜೇಶ್, ಅಮ್ಜಾದ್‌ಖಾನ್ ಇತರರು ಇದ್ದರು.
Published on

ಹನೂರು: ಜನರಿಗೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಗುರುವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿನ ಅಜ್ಜೀಪುರ- ರಾಮಾಪುರ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಈ ಮಾರ್ಗವು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಹಾಳಾಗಿತ್ತು. ಜತೆಗೆ ಇತ್ತೀಚೆಗೆ ಅಧಿಕ ಭಾರದ ಸರಕು ಸಾಗಣೆ ವಾಹನಗಳಿಂದ ರಸ್ತೆಯು ತೀವ್ರ ಹದಗೆಟ್ಟಿತ್ತು. ಇದರಿಂದ ಅಪಘಾತಕ್ಕೆ ಕಾರಣವಾಗಿತ್ತು. ಜತೆಗೆ ಈ ಭಾಗದ ಜನರು ಸಂಚರಿಸಲು ತುಂಬ ತೊಂದರೆ ಅನುಭವಿಸುತ್ತಿದ್ದರು. ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದನ್ನು ಮನಗಂಡು 10 ಲಕ್ಷ ರೂ. ವೆಚ್ಚದಲ್ಲಿ 3.75 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ನಿರ್ಮಾಣ ಕಾಮಗಾರಿಯ ಜವಾಬ್ದಾರಿಯನ್ನು ಹೊತ್ತವರು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.

ಈ ಮಾರ್ಗದ ರಸ್ತೆ ಅಭಿವೃದ್ಧಿಗೆ 26 ಕೋಟಿ ರೂ. ಅಗತ್ಯವಿದ್ದು, ಈಗಾಗಲೇ ಸರ್ಕಾರದಿಂದ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಪ್ರಕ್ರಿಯೆ ಟೆಂಡರ್‌ನಲ್ಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ರಸ್ತೆಯೂ ಅಭಿವೃದ್ಧಿ ಹೊಂದಲಿದೆ. ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಕ್ಷೇತ್ರವನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಪಿಡಬ್ಲುೃಡಿ ಎಇಇ ಚಿನ್ನಣ್ಣ, ಎಇ ಮಹೇಶ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಗ್ರಾಪಂ ಅಧ್ಯಕ್ಷರಾದ ರುದ್ರನಾಯ್ಕ, ಮುತ್ತುರಾಜು, ಕೊಳ್ಳೇಗಾಲ ಛಲವಾದಿ ಮಹಾಸಭಾದ ಅಧ್ಯಕ್ಷ ಬಸವರಾಜು, ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಮುಖಂಡರಾದ ಮಣಿ, ಮಂಜೇಶ್, ರಾಜೇಂದ್ರ, ಲೋಕೇಶ್, ಶಿವರಾಮು, ರಾಜಣ್ಣ, ಮರಿಯಪ್ಪ, ಮಂಜೇಶ್, ಶಿವಮಲ್ಲೇಗೌಡ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net