

ಬೆಂಗಳೂರು: ಬೆಂಗಳೂರಿನಲ್ಲಿ ನಾಗರಿಕ ಸ್ನೇಹಿ ಸೇವೆ, ಉತ್ತಮ ಆಡಳಿತ, ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ತಂದು 5 ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಸೆ.02ರಂದು ಬೆಂಗಳೂರು ಮಹಾನಗರದ ಪಾಲಿಗೆ ವಿಶೇಷವಾದ ದಿನ. ಈ ದಿನದಿಂದ ಬೆಂಗಳೂರಿನಲ್ಲಿ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ ಪಾಲಿಕೆಗಳನ್ನು ಬೆಂಗಳೂರಿನ ಹೆಸರಿನೊಂದಿಗೆ ರಚಿಸಲು ಕಾನೂನಿನಲ್ಲೇ ತಿಳಿಸಿದ್ದೇವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2025ರ ಆ.26ರಂದು ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ಸಮಿತಿ ರಚನೆಯಾಗಿದೆ. ಇದರಲ್ಲಿ 75 ಸದಸ್ಯರನ್ನು ನೇಮಕ ಮಾಡಲಾಗಿದೆ” ಎಂದು ಹೇಳಿದರು.
“ಎಲ್ಲಾ ವಲಯಗಳಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳಾಗಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಆಯುಕ್ತರಿಗೆ ನೆರವಾಗಲು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಕೆಎಎಸ್ ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್ ಕಡ್ಡಾಯವಾಗಿ ಇರುತ್ತಾರೆ. ಈ ಹಿಂದೆ ಇದ್ದ 27 ವಿಭಾಗಗಳನ್ನು 50 ವಿಭಾಗಗಳಾಗಿ ಮಾಡಿದ್ದೇವೆ. 75 ಉಪ ವಿಭಾಗಗಳನ್ನು 150ಕ್ಕೆ ಏರಿಸಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಗರಿಷ್ಠ 150 ವಾರ್ಡ್ ಗಳವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಾಲಿಕೆಯಲ್ಲಿ ಸರಾಸರಿಯಲ್ಲಿ 100 ವಾರ್ಡ್ ಗಳಂತೆ ಬೆಂಗಳೂರಿನಲ್ಲಿ ಸುಮಾರು 500 ಹೊಸ ನಾಯಕರುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು 50:50 ಇರುತ್ತಾರೆ” ಎಂದು ತಿಳಿಸಿದರು.
“ನಾಳೆಯಿಂದಲೇ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣ ಆಯಾ ಪಾಲಿಕೆಗೆ ಸೇರಲಿದೆ. ಈ ತೆರಿಗೆ ಹಣ ಜಿಬಿಎಗಾಗಲಿ ಅಥವಾ ರಾಜ್ಯ ಸರ್ಕಾರಕ್ಕಾಗಲಿ ಬರುವುದಿಲ್ಲ. ನಾವು ಯಾವುದೇ ರೀತಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗುವುದಿಲ್ಲ. ಪಾಲಿಕೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಮುಂದೆ ಜಿಬಿಎ ಮೂಲಕ ದೊಡ್ಡ ದೊಡ್ಡ ಯೋಜನೆಗಳ ಜಾರಿ, ಉತ್ತಮ ಆಡಳಿತ, ಸೇವೆಗೆ ಮೀಸಲಾಗಿರಲಿದೆ. ಸರ್ಕಾರದಿಂದ ಬಂದ ಹಣ ಜಿಬಿಎ ಹಾಗೂ ಪಾಲಿಕೆಗಳಿಗೆ ಹೋಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಚುನಾವಣೆ ನಡೆಯಲಿದೆ. ಸಧ್ಯ ನಗರದ ಜನಸಂಖ್ಯೆ 1.44 ಕೋಟಿ ಎಂದು ಅಂದಾಜಿಸಲಾಗಿದೆ. 2011ರ ಜನಗಣತಿ ಪ್ರಕಾರ ವಾರ್ಡ್ ನಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಈಗ 35-40 ಸಾವಿರ ಸರಾಸರಿಯಲ್ಲಿ ವಾರ್ಡ್ ರಚನೆ ಮಾಡಲಾಗುವುದು” ಎಂದು ವಿವರಿಸಿದರು.
“ಮುಂದಿನ ದಿನಗಳಲ್ಲಿ ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದ್ದೇವೆ. ಕಾನೂನಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಆಯಾ ಪಾಲಿಕೆಗಳು ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಿವೆ. ಈಗ ಹಾಲಿ ಇದ್ದ ಪಾಲಿಕೆ ವ್ಯಾಪ್ತಿಗೆ ಜಿಬಿಎ ರಚಿಸಿ, ಐದು ಪಾಲಿಕೆ ಮಾಡಿದ್ದೇವೆ. ಇದನ್ನು ಜಾರಿಗೆ ತರಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆನೇಕಲ್ ಕ್ಷೇತ್ರಕ್ಕೆ ಸೇರಿದ್ದ ಒಂದು ವಾರ್ಡ್ ಬಿಟ್ಟುಹೋಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ” ಎಂದು ಹೇಳಿದರು.
ನವೆಂಬರ್ 1ರಂದು ಹೊಸ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಜಾಗ ಗುರುತಿಸಲಾಗಿದೆ. ಈ ಐದೂ ಪಾಲಿಕೆ ಕಚೇರಿಗಳು ಒಂದೇ ರೀತಿ ನಿರ್ಮಾಣವಾಗಬೇಕು. ಇದಕ್ಕಾಗಿ ಅತ್ಯುತ್ತಮ ವಾಸ್ತುಶಿಲ್ಪವನ್ನ ಸಿದ್ಧತೆ ಮಾಡಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು. ಅತ್ಯುತ್ತಮ ವಿನ್ಯಾಸಕ್ಕೆ 5 ಲಕ್ಷ ಬಹುಮಾನ ನೀಡಲು ಸೂಚಿಸಿದ್ದೇನೆ. ಇನ್ನು ಜಿಬಿಎ ಲೋಗೋಗಳಿಗೂ ಸಲಹೆ ನೀಡಲು ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.