ಗ್ರೇಟರ್​ ಬೆಂಗಳೂರು ಸರ್ವೇ ಆರಂಭ

bidadi
Published on

ಬಿಡದಿ: ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಲಿರುವ ಗ್ರೇಟರ್​ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಸಂಬಂಧ ಜಂಟಿ ಅಳತೆ ಪ್ರಮಾಣೀಕರಣ ಕಾರ್ಯ ಆರಂಭವಾಗಿದೆ.

ಕೆಂಪ್ಪಯ್ಯನಪಾಳ್ಯ ಹಾಗೂ ತಾಯಪ್ಪನದೊಡ್ಡಿ ಗ್ರಾಮಗಳಲ್ಲಿ ಗುರುವಾರ ಜಂಟಿ ಸರ್ವೇ ಪ್ರಾರಂಭಗೊಂಡಿದ್ದು, ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ಸಂಬಂಧಿಸಿದ ಅಧಿಕಾರಿಗಳ ತಂಡ ಸರ್ವೇ ಕಾರ್ಯ ಕೈಗೊಂಡಿತು.

ಜೆಎಂಸಿಯಿಂದ ಸರ್ವೇ: ಭೂ ಸ್ವಾಧಿನ ಪ್ರಕ್ರಿಯೆ ಹಾಗೂ ಪರಿಹಾರ ನಿರ್ಧಾರ ಮಾಡುವುದರಲ್ಲಿ ಜೆಎಂಸಿ ಮಹತ್ವದ ಪಾತ್ರ ವಹಿಸಲಿದೆ. ಹಾಗಾಗಿ ಇಡೀ ಸರ್ವೇ ಕಾರ್ಯದಲ್ಲಿ ಪಾರದರ್ಶಕತೆ ಕಂಡು ಕೊಳ್ಳುವ ನಿಟ್ಟಿನಲ್ಲಿ ಮೊಬೈಲ್​ ಆ್ಯಪ್​ ಆಧಾರಿತ ಸರ್ವೇ ಮಾಡಲಾಯಿತು.

12 ತಂಡಗಳಿಂದ ಸರ್ವೇ: ಜೆಎಂಸಿನಿಂದ ಪ್ರಾರಂಭವಾಗಿರುವ ಸರ್ವೇ ಕಾರ್ಯದಲ್ಲಿ ಒಟ್ಟು 12 ತಂಡಗಳಿದ್ದು, ಒದೊಂದು ತಂಡದಲ್ಲೂ 7&8 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭೂ ಮಾಪನ, ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳು ತಂಡದಲ್ಲಿದ್ದಾರೆ.

ರೈತರ ವಿರೋಧ: ತಾಯಪ್ಪನ ದೊಡ್ಡಿ ಗ್ರಾಮಕ್ಕೆ ಸರ್ವೇ ಮಾಡಲು ಬಂದ ಅಧಿಕಾರಿಗಳನ್ನ ರೈತರು ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ನಮ್ಮ ಜಮೀನು ಕೊಡುವುದಿಲ್ಲ. ಸರ್ವೇ ಮಾಡಬೇಡಿ ಎಂದು ಪಟ್ಟು ಹಿಡಿದರು. ನಮ್ಮ ಭೂಮಿ ನಮ್ಮ ಹಕ್ಕು ಎಂದು ೂಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಂಪ್ಪಯ್ಯನಪಾಳ್ಯ ಗ್ರಾಮದಲ್ಲಿ ಕೆಲವು ರೈತರ ವಿರೋಧದ ನಡುವೆಯು ಸರ್ವೇ ಮಾಡಲಾಯಿತು.

ಗಿಡ ಮರಗಳ ಲೆಕ್ಕ: ಪ್ರಮುಖವಾಗಿ ಜಮೀನು ಅಳತೆ ಜತೆಗೆ ಜಮೀನಿನಲ್ಲಿರುವ ಬೆಳೆ, ತೆಂಗಿನಮರ, ಅಡಕೆ ಮರ, ರೇಷ್ಮೆ ಮನೆ, ಪಂಪ್​ಸೆಟ್​ ಮನೆ, ಬೋರ್​ವೆಲ್​ ಒಳಗೆ ಬಿಟ್ಟಿರುವ ಪೈಪ್​ ಹಾಗೂ ಜಮೀನಿನಲ್ಲಿರುವ ವಿವಿಧ ಬಗೆಯ ಮರಗಳ ಸಂಖ್ಯೆಯನ್ನೂ ಪರಿಗಣನೆಗೆ ತಗೆದುಕೊಳ್ಳಲಾಯಿತು.

ಅಧಿಕಾರಿಗಳಿಂದ ಮನವೊಲಿಕೆ ಸರ್ವೇಗೆ ರೈತರು ಅಡ್ಡಿಪಡಿಸುತ್ತಿರುವ ವಿಷಯ ತಿಳಿದ ಜಿಬಿಡಿಎನ ಸಹಾಯಕ ಆಯುಕ್ತ ಮಾರುತಿ ಪ್ರಸನ್ನ ಹಾಗೂ ಡಿವೈಎಸ್ಪಿ ಶ್ರೀನಿವಾಸ್​, ಸಿಪಿಐ ಶಂಕರ್​ ಅವರು ಗ್ರಾಮಕ್ಕೆ ಬಂದು ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಅಂತಿಮವಾಗಿ ಯಾರು ಭೂಸ್ವಾಧಿನಕ್ಕೆ ಒಪ್ಪಿಗೆ ಸೂಚಿಸಿದ್ದಾರೋ ಅಂತಹ ರೈತರ ಜಮೀನುಗಳಲ್ಲಿ ಸರ್ವೇ ಮಾಡಿದರು. ಇಂದಿನಿಂದ ಧರಣಿ ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಡೆಸುತ್ತಿರುವ ಭೂಸ್ವಾಧಿನ ಪ್ರಕ್ರಿಯೆ ವಿರೋಧಿಸಿ ಧರಣಿ ನಡೆಸಲು ಬೈರಮಂಗಲ& ಕಂಚುಗಾರನಹಳ್ಳಿ ರೈತರ ಭೂ ಹಿತರಣಾ ಸಂದಿಂದ ತೀರ್ಮಾನ ಮಾಡಿದ್ದು. ಶುಕ್ರವಾರ ಕಂಚುಗಾರನಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದಿಂದ ಬೈರಮಂಗಲ ವರೆಗೆ ಮೆರವಣಿಗೆ ಬಂದು ಬೈರಮಂಗಲ ಗ್ರಾಮದಲ್ಲಿ ಧರಣಿ ಪ್ರಾರಂಭಿಸಲಿದ್ದಾರೆ.

ಈಗ ಪ್ರಥಮ ಹಂತವಾಗಿ ಜೆಎಂಸಿಯಿಂದ ಮೊಬೈಲ್​ ಆಧಾರಿತ ಸರ್ವೇ ಮಾಡಿಸಲಾಗುತ್ತಿದೆ. ಈ ಸರ್ವೇಯಲ್ಲಿ ಪ್ರತಿಯೊಬ್ಬ ರೈತನ ಜಮೀನಿನಲ್ಲಿರುವ ಬೆಳೆಗಳ ಅಧಿಕೃತ ಮಾಹಿತಿಯನ್ನು ಜಮೀನು ಮಾಲೀಕರ ಮುಂದೆಯೇ ದಾಖಲು ಮಾಡಿಕೊಳ್ಳಲಾಗುತ್ತಿದೆ. ಹಲವು ರೈತರು ಸರ್ವೇ ಕಾರ್ಯ ಮಾಡಿಸುತ್ತಿದ್ದಾರೆ. > ಮಾರುತಿ ಪ್ರಸನ್ನ, ವಿಶೇಷ ಭೂಸ್ವಾಧಿನ ಅಧಿಕಾರಿ, ಜಿಬಿಡಿಎ ಉಪ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net