ಮಾದಪ್ಪಗೆ ಮಹಾ ರುದ್ರಾಭಿಷೇಕ

06 HNAUR 3
ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶ್ರೀ ಸಾಲೂರು ಬೃಹನ್ಮಠದ ವತಿಯಿಂದ ನೆರವೇರಿದ ಮಹಾ ರುದ್ರಾಭಿಷೇಕದ ಬಳಿಕ ವಿವಿಧ ಉತ್ಸವ ಮೂರ್ತಿಗಳನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಶರತ್‌ಚಂದ್ರ ಸ್ವಾಮೀಜಿ, ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪರಶಿವಮೂರ್ತಿ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಎ.ಈ ರಘು, ಧರ್ಮೇಂದ್ರ ಇತರರು ಇದ್ದರು.
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮುಕ್ತಾಯದ ಹಿನ್ನೆಲೆಯಲ್ಲಿ ಗುರುವಾರ ಶ್ರೀ ಸಾಲೂರು ಬೃಹನ್ಮಠದ ವತಿಯಿಂದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸ್ವಾಮಿಗೆ ಮೊದಲನೇ ಮಹಾ ರುದ್ರಾಭಿಷೇಕವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

ಮ.ಬೆಟ್ಟದಲ್ಲಿ 5 ದಿನಗಳ ಕಾಲ ಜರುಗುವ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಮುಕ್ತಾಯದ ಮೊದಲನೇ ಗುರುವಾರ ಶ್ರೀ ಸಾಲೂರು ಬೃಹನ್ಮಠದ ವತಿಯಿಂದ ಪೀಠಾಧಿಪತಿಗಳ ಸಾನ್ನಿಧ್ಯದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಸ್ವಾಮಿಗೆ 101 ಪೂಜೆಯನ್ನು ನೆರವೇರಿಸುವುದು ಸಂಪ್ರದಾಯ. ಈ ಪೂಜೆಯು ಕಾಲಾನಂತರದಲ್ಲಿ ಧಾರ್ಮಿಕವಾಗಿ ಮಹಾ ರುದ್ರಾಭಿಷೇಕವಾಗಿ ಪರಿವರ್ತನೆಯಾಯಿತು. ಅದರಂತೆಯೇ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾದಪ್ಪನಿಗೆ ಮಹಾ ರುದ್ರಾಭಿಷೇಕವನ್ನು ನೆರವೇರಿಸಲಾಯಿತು. ಈ ವೇಳೆ ಮಾದಪ್ಪನಿಗೆ 101 ಮಜ್ಜನ ಸೇವೆ, ಭಸ್ಮಧಾರಣೆ, ಬಿಲ್ವಾರ್ಚನೆ ಹಾಗೂ ಎಳನೀರು, ಜೇನುತುಪ್ಪ, ಹಾಲು, ಮೊಸರು ಹಾಗೂ ಇನ್ನಿತರ ದ್ರವ್ಯಗಳಿಂದ ಅಭಿಷೇಕವನ್ನು ನೆರವೇರಿಸಲಾಯಿತು. ವಿಶೇಷವಾಗಿ ಸ್ವಾಮಿಗೆ ಪಂಚಾಮೃತ ಅಭಿಷೇಕವನ್ನು ನೆರವೇರಿಸಿ ನೈವೇದ್ಯ ಅರ್ಪಿಸಲಾಯಿತು. ಬಳಿಕ ಸ್ವಾಮಿಯ ಮೂರ್ತಿಗೆ ಚಿನ್ನದ ಕಿರೀಟ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿ ದೀಪ, ಧೂಪದಾರತಿ ಸೇವೆ ಹಾಗೂ ಮಹಾ ಮಂಗಳಾರತಿಯನ್ನು ಬೆಳಗಿಸುವುದರ ಮೂಲಕ ಮಾದಪ್ಪನಿಗೆ ಮಹಾ ರುದ್ರಾಭಿಷೇಕವನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.

ಉತ್ಸವ ಮೂರ್ತಿಗಳ ಪ್ರದಕ್ಷಿಣೆ: ಮಹಾ ರುದ್ರಾಭಿಷೇಕದ ಮುಗಿದ ಬಳಿಕ ಶ್ರೀಗಳ ಸಾನ್ನಿಧ್ಯದಲ್ಲಿ ಸತ್ತಿಗೆ, ಸೂರಿಪಾನಿ, ನಂದಿಕಂಬ ಹಾಗೂ ಮಂಗಳ ವಾದ್ಯ ಮೇಳದೊಂದಿಗೆ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವ ವಾಹನಗಳನ್ನು ದೇಗುಲದ ಒಳಾಂಗಣದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಆಗಮಿಸಿದ್ದ ಹರಗುರು ಶರಣರು, ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಜಯಘೋಷಗಳನ್ನು ಮೊಳಗಿಸುವುದರ ಮೂಲಕ ಮಾದಪ್ಪನಿಗೆ ಭಕ್ತಿಭಾವ ಮೆರೆದರು. ಬಳಿಕ ಭಕ್ತರಿಗೆ ನೈವೇದ್ಯದ ಪಂಚಾಮೃತವನ್ನು ವಿತರಿಸಲಾಯಿತು. ಮಹಾ ರುದ್ರಾಭಿಷೇಕದ ಹಿನ್ನೆಲೆ ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು.

ಮಹಾ ರುದ್ರಾಭಿಷೇಕದ ವೇಳೆ ಸಾಲೂರು ಬೃಹನ್ಮಠದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ, ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಬರಡನಪುರ ಮಠದ ಶ್ರೀ ಪರಶಿವಮೂರ್ತಿ ಸ್ವಾಮೀಜಿ, ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಡಿವೈಎಸ್ಪಿ ಧರ್ಮೇಂದ್ರ, ಬೇಡಗಂಪಣ ಸಮುದಾಯಸ್ಥರು, ಭಕ್ತರು ಹಾಗೂ ಶ್ರೀ ಮಠದ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net