

ಮದ್ದೂರು: ಸಮಾಜದ ಪರಿವರ್ತನೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಅಗಾಧವಾದ ಪರಿಣಾಮ ಬೀರಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ಹೇಳಿದರು.
ತಾಲೂಕಿನ ಬೆಸಗರಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶನಿವಾರ ಸಂಕಲ್ಪ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ ಆಯೋಜಿಸಿದ್ದ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರು ಎಲ್ಲ ಬಗೆಯ ಸಾಹಿತ್ಯವನ್ನು ರಚಿಸುವ ಮೂಲಕ ಕನ್ನಡ ಭಾಷಾ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಅವರ ಜೀವನವನ್ನು ಅಧ್ಯಯನ ಮಾಡುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಕುವೆಂಪು ಅವರು ಕಾವ್ಯ, ಕವಿತೆ, ನಾಟಕ, ಆತ್ಮಕಥೆ ಸೇರಿದಂತೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸುವ ಮೂಲಕ ಕನ್ನಡಕ್ಕೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಕವಿತೆಯ ಸಾಲುಗಳು ಮತ್ತು ಅವರ ವಿಚಾರಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ವಳಗೆರೆಹಳ್ಳಿ ವಿ.ಸಿ. ಉಮಾಶಂಕರ್ ಮಾತನಾಡಿ, ಕುವೆಂಪು ಅವರು ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಆಡಂಬರದ ಮದುವೆಗಳಿಗೆ ತಿಲಾಂಜಲಿ ಇಟ್ಟು, ಮಂತ್ರ ಮಾಂಗಲ್ಯ ಆಚರಣೆಗೆ ತಂದು, ಸರಳ ಮದುವೆಗಳನ್ನು ಪ್ರೋತ್ಸಾಹಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಂಶುಪಾಲರಾದ ಯಧುಶೈಲ ಸಂಪತ್ ಮಾತನಾಡಿ, ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದು, ಕುವೆಂಪು ಅವರ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಬಂಗಾರವಾಗುವುದರ ಜತೆಗೆ ನೆಮ್ಮದಿಯ ಜೀವನ ಮಾಡಬಹುದು ಎಂದರು.
ಕನ್ನಡ ಭಾಷಾ ಶಿಕ್ಷಕ ಎಂ.ತ್ರಿಮೂರ್ತಿ ಅವರು ಕುವೆಂಪು ಅವರ ಬಗ್ಗೆ ವಿಚಾರ ಮಂಡಿಸಿದರು. ಕುವೆಂಪು ಅವರ ವಿಚಾರಧಾರೆಗಳ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಗ್ರಾಪಂ ಉಪಾಧ್ಯಕ್ಷೆ ಶಾಹಿನ್ ತಾಜ್, ಕೆಪಿಎಸ್ ಸಮಿತಿ ಉಪಾಧ್ಯಕ್ಷ ಬಿ.ಎಸ್.ನಾಗರಾಜ, ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲ ಬಂಗಾರನಾಯಕ, ಉಪ ಪ್ರಾಂಶುಪಾಲ ಚಲುವರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಕೃಷ್ಣಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಸಿ.ಉಮಾಶಂಕರ್, ಮುಖ್ಯಶಿಕ್ಷಕಿ ಸುಧಾ, ಶಿಕ್ಷಕ ಎಂ.ತ್ರೀಮೂರ್ತಿ, ಸಂಘಟಕ ಬಿ.ಎ.ಮಧುಕುಮಾರ ಬೆಸಗರಹಳ್ಳಿ, ಮುಖಂಡರಾದ ಬಿ.ಆರ್.ಚೇತನ್‌ಕುಮಾರ್, ಸಾಗರ್, ಸೀನಪ್ಪನದೊಡ್ಡಿ ಶ್ರೀನಿವಾಸ್ ಇದ್ದರು.