ಬಲಾಢ್ಯರಿಂದ ಸ್ಮಶಾನ ಜಾಗ ಒತ್ತುವರಿ

FotoJet (2)
Published on

ತೆರವಿಗೆ ಆಗ್ರಹಿಸಿ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ತಾಲೂಕು ಆಡಳಿತಕ್ಕೆ ಧರಣಿ ಎಚ್ಚರಿಕೆ

ಬಾಗೇಪಲ್ಲಿ: ತಾಲೂಕಿನ ಶಂಖಂವಾರಪಲ್ಲಿ ಗ್ರಾಮದ ಸ್ಮಶಾನ ಸೇರಿ ತಾಲೂಕಿನ ಗ್ರಾಮೀಣ ಭಾಗದ ಹಲವೆಡೆ ಸ್ಮಶಾನ ಜಾಗ ಒತ್ತುವರಿ, ಸ್ಮಶಾನ ರಸ್ತೆ ಮಾರ್ಗ, ಜಮೀನುಗಳಿಗೆ ಹೋಗುವ ದಾರಿಯನ್ನು ಕೆಲ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಸಿಪಿಎಂ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮನೀಷಾ ಎನ್. ಪತ್ರಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಸಿಪಿಎಂ ಮುಖಂಡ ಎಸ್.ಲಕ್ಷ್ಮಣ್ ರೆಡ್ಡಿ ಮಾತನಾಡಿ, ಸ್ಮಶಾನ ಜಾಗವನ್ನು ರಾಜಕೀಯ ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ತೆರವು ಮಾಡಿಸುವಂತೆ ಎರಡು ವರ್ಷಗಳಿಂದ ತಹಸೀಲ್ದಾರ್ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲ. ನಕಾಶೆಯಲ್ಲಿರುವಂತೆ ಸ್ಮಶಾನಕ್ಕೆ ಹಾಗೂ ರೈತರ ಜಮೀನುಗಳಿಗೆ ಓಡಾಡಲು ಆಗದೆ, ಮೃತರ ಶವಸಂಸ್ಕಾರಕ್ಕೂ ಪರದಾಡುವಂತಾಗಿದೆ.

ಒಬ್ಬರ ಜಮೀನು ದಾಟಿ ಮತ್ತೊಬ್ಬರ ಜಮೀನಿಗೆ ಹೋಗಲು ದಾರಿಯೇ ಇಲ್ಲ. ನಕಾಶೆಯಲ್ಲಿ ರಸ್ತೆಯಿದ್ದರೂ ಒತ್ತುವರಿ ಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಹಾಗಾಗಿ ಕೂಡಲೇ ರಸ್ತೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಿಪಿಎಂ ಮುಖಂಡರಾದ ಎಂ.ಎನ್.ರಘುರಾಮರೆಡ್ಡಿ, ಮುನಿವೆಂಕಟಪ್ಪ, ಚನ್ನರಾಯಪ್ಪ, ಬಿಳ್ಳೂರು ನಾಗರಾಜ್, ಸೋಮಶೇಖರ್, ಗ್ರಾಮಸ್ಥರಾದ ಎಸ್.ಎನ್.ಆದಿನಾರಾಯಣಪ್ಪ, ಹರೀಶ್, ನಾರಾಯಣ ಸ್ವಾಮಿ, ನಂಜುಂಡಪ್ಪ, ಗಂಗಪ್ಪ, ವೆಂಕಟೇಶಪ್ಪ, ಗುರ‌್ರಪ್ಪ, ಗಂಗರಾಜು, ಸಿ.ಬಾವನ್ನ, ನಾಗರಾಜ ಮತ್ತಿತರರು ಇದ್ದರು.

ಶವಸಂಸ್ಕಾರಕ್ಕೂ ಜಾಗವಿಲ್ಲ

ತಾಲೂಕಿನಲ್ಲಿ ಶವಸಂಸ್ಕಾರಕ್ಕೆ ಹಲವೆಡೆ ಸೂಕ್ತ ಜಾಗವಿಲ್ಲ, ಸ್ಮಶಾನಕ್ಕೆ ಜಾಗವಿದ್ದರೂ ಬಲಾಢ್ಯರಿಂದ ಒತ್ತುವರಿ, ನಿರ್ವಹಣೆ ಕೊರತೆ, ದಾರಿ ಇಲ್ಲದಿರುವುದು ಮತ್ತಿತರ ಕಾರಣಗಳಿಂದ ಸಾವಿನ ನಂತರ ಜನ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ತಾಲೂಕಿನೆಲ್ಲೆಡೆ ಸ್ಮಶಾನ ಜಾಗ ಗುರುತಿಸಿ, ರಕ್ಷಿಸಬೇಕು. ಹಾಗೆಯೇ ರಾಜಕೀಯ ಬಲಾಢ್ಯರು ಮಾಡಿರುವ ಶಂಖಂವಾರಪಲ್ಲಿ ಗ್ರಾಮದ ಸ್ಮಶಾನ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ತಾಲೂಕು ಆಡಳಿತವನ್ನು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net