

ಹಾರೋಹಳ್ಳಿ : ಹೋಬಳಿಯ ಕಗ್ಗಲಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ತಹಸೀಲ್ದಾರ್ ಆರ್.ಸಿ.ಶಿವಕುಮಾರ್ ಅವರು ಸ್ಮಶಾನ ಜಾಗ ಗುರುತಿಸಿದರು.
ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್, ಜಾಗವನ್ನು ಗುರುತು ಮಾಡಿದ್ದು, ವಾರದೊಳಗೆ ಕಡತಗಳನ್ನು ಹಸ್ತಾಂತರಿಸಲಾಗುವುದು ಎಂದರು.
ಗ್ರಾಮದಲ್ಲಿ ಗುರುವಾರ ದಲಿತರೊಬ್ಬರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಸ್ಮಶಾನ ಜಾಗವಿಲ್ಲದ ಪರಿಣಾಮ ಆಕ್ರೋಶಗೊಂಡ ಸಮುದಾಯದವರು ಗ್ರಾಮದಲ್ಲಿ ಶವ ಇಟ್ಟು, ಸ್ಥಳ ನೀಡುವಂತೆ ಪಟ್ಟು ಹಿಡಿದಿದ್ದರು. ಮಾಹಿತಿ ತಿಳಿದ ತಹಸೀಲ್ದಾರ್‌ರು ಜಾಗ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿ ಈಶ್ವರ್‌ಗೆ ಸೂಚಿಸಿದ್ದರು. ಬಳಿಕ ಶವಸಂಸ್ಕಾರ ಮಾಡಲಾಗಿತ್ತು. ಸಮುದಾಯಕ್ಕೆ ಶಾಶ್ವತವಾಗಿ ಸ್ಮಶಾನ ಭೂಮಿ ಗುರುತಿಸುವ ನಿಟ್ಟಿನಲ್ಲಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಸ್ಥಳೀಯರೊಂದಿಗೆ ಚರ್ಚಿಸಿ, ಭೂಮಿ ಗುರುತು ಮಾಡಿದರಲ್ಲದೇ ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ ಸ್ಮಶಾನದ ಜಾಗ ಸಮಸ್ಯೆ ಗಂಭೀರ ವಿಷಯಗಳಾಗಿದ್ದು, ಮೂಲಸೌಲಭ್ಯಗಳಲ್ಲಿ ಒಂದಾಗಿದೆ. ಎಲ್ಲ ಗ್ರಾಮಗಳಲ್ಲಿ ಸ್ಮಶಾನದ ಭೂಮಿಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ ಎಂದರು.