

ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣ ಬಳಿಯ ಅಚ್ಗಾಳ್ ಯಾತ್ರಿ ನಿವಾಸ್ ಮುಂಭಾಗದ ಹೆದ್ದಾರಿ ರಸ್ತೆಯಲ್ಲಿ ಟಿಪ್ಪರ್ ಲಾರಿಯಿಂದ ಜಲ್ಲಿಕಲ್ಲು ರಸ್ತೆಗೆ ಸುರಿದ ಪರಿಣಾಮ ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ.
ಪಟ್ಟಣ ವ್ಯಾಪ್ತಿಯಲ್ಲಿ ಜಲ್ಲಿಕಲ್ಲು ತುಂಬಿದ ಟಿಪ್ಪರ್‌ಗಳು ವೇಗವಾಗಿ ಹಾದು ಹೋಗುವಾಗ ರಸ್ತೆ ಬಿದ್ದು ಹರಡಿದೆ. ಇದರಿಂದ ಬೈಕ್ ,ಆಟೋ , ಕಾರು ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಅಂತೆಯೇ, ಅಚ್ಗಾಳ್ ಯಾತ್ರಿ ನಿವಾಸ್ ಎದುರಿನ ರಸ್ತೆಯ ಕ್ರಾಸ್‌ನಲ್ಲಿ ಶನಿವಾರ ಚಾಮರಾಜನಗರ ಕಡೆಯಿಂದ ಬಂದ ಟಿಪ್ಪರ್ ವೇಗವಾಗಿ ತಿರುವು ಪಡೆದುಕೊಂಡಿದೆ. ಈ ವೇಳೆ ಟಿಪ್ಪರ್ ಮೇಲಿದ್ದ ಜಲ್ಲಿಕಲ್ಲುಗಳು ರಸ್ತೆಗೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.
ಬಳಿಕ ಈ ರಸ್ತೆಯಲ್ಲಿ ವಾಹನ ಸವಾರರು ಪಾದಚಾರಿಗಳು, ವಾಹನ ಸವಾರರು ಭಯದಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾರಿ, ಬಸ್ ಹಾಗೂ ಇನ್ನಿತರ ಬಾರಿ ವಾಹನಗಳು ಜಲ್ಲಿಜಕಲ್ಲಿನ ಮೇಲೆ ತೆರಳುವಾಗ ವಾಹನದ ಚಕ್ರ ಬದಿಗೆ ಸಿಲುಕಿ ಹಾರುವ ವೇಳೆ ಅಕ್ಕಪಕ್ಕದಲ್ಲಿರುವ ಸಂಚಾರಿಗಳಿಗೆ ತಗುಲಿ ಗಾಯವಾಗುವ ಸಂಭವ ಹೆಚ್ಚಿದೆ.
ಪಟ್ಟಣದ ಕಡೆಗೆ ಬರುವ ಜಲ್ಲಿಕಲ್ಲು ತುಂಬಿದ ಟಿಪ್ಪರ್ ಲಾರಿಗಳು ಸಾಮರ್ಥ್ಯಕಿಂತ ಹೆಚ್ಚು ಭಾರ ಹೊತ್ತು ಬರುವುದರಿಂದ ಹಾಗೂ ಅತಿ ವೇಗವಾಗಿ ಚಲಿಸುವುದರಿಂದ ರಸ್ತೆಯ ಮೇಲೆ ಜಲ್ಲಿಕಲ್ಲು ಬಿದ್ದು ಸಾರ್ವಜನಿಕರಿಗೆ ಬಹಳ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಾಗಲಿ, ನಗರಸಭೆ ಅಧಿಕಾರಿಗಳಾಗಲಿ ಯಾವುದೇ ಕ್ರಮವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಅತಿ ಭಾರ ಹೊತ್ತು ರಾಜಾರೋಷವಾಗಿ ಸಂಚರಿಸುವ ಟಿಪ್ಪರ್ ಲಾರಿಗಳ ಮೇಲೆ ಕ್ರಮವಹಿಸುವಂತೆ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.