

ಚನ್ನಪಟ್ಟಣ
ಅಂತೂ.., ಇಂತೂ.., ನಗರದ ಯುಜಿಡಿ ಯೋಜನೆಗೆ ಕಾಲ ಕೂಡಿ ಬಂದಿದೆ. ಯುಜಿಡಿ ಎರಡನೇ ಹಂತದ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಹಿಂದಿನ 94 ಕೋಟಿ ಅನುದಾನ ಸೇರಿದಂತೆ ಯುಜಿಡಿಯ ವಿಸ್ತ್ರತ ಯೋಜನೆಗೆ 128.74 ಕೋಟಿ ರೂ ಯೋಜನೆಗೆ ಅನುಮೋದನೆ ದೊರಕಿದೆ. 2ನೇ ಹಂತದ 128.74 ಕೋಟಿ ರೂ. ಅನುದಾನದ ಯೋಜನೆಗೆ ಸರ್ಕಾರದಿಂದ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.
ಕಳೆದ 15 ವರ್ಷಗಳಿಂದ ಯುಜಿಡಿ ಯೋಜನೆ ನನೆಗುದಿಗೆ ಬಿದ್ದಿದೆ. ಮೊದಲ ಹಂತದಲ್ಲಿ ಕೇವಲ ಪೈಪ್‌ಲೈನ್ ಕಾಮಗಾರಿ ಮಾತ್ರ ಆಗಿದ್ದು, ಎರಡನೇ ಹಂತದಲ್ಲಿ ಎಸ್‌ಟಿಪಿ ಘಟಕ, ವೆಟ್‌ವೆಲ್ ನಿರ್ಮಾಣ ಹಾಗೂ ಹೆಚ್ಚುವರಿ ಪೈಪ್‌ಲೈನ್‌ಗೆ ಅನುದಾನದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸಿಎಂ ಬೊಮ್ಮಾಯಿಯವರ ಬಿಜೆಪಿ ಸರ್ಕಾರದಲ್ಲಿ ಯೋಗೇಶ್ವರ್ ಎಂಎಲ್‌ಸಿ ಆಗಿದ್ದ ವೇಳೆ ೯೪ ಕೋಟಿ ರೂ. ಅನುದಾನವನ್ನು ಬಿಡುಗಡೆಯಾಗಿತ್ತು.
ಆ ವೇಳೆ ಅ ಅನುದಾನವನ್ನು ಅಂದಿನ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ``ನಾ ತಂದೆ ಎಂತಲೂ.., ಸಿಪಿ. ಯೋಗೇಶ್ವರ್ ನಾ ತಂದೆ ಎಂತಲೂ ಕ್ರೆಡಿಟ್‌ವಾರ್ ಸಹ ನಡೆಸಿದರು. ಆದರೆ, ಇದೀಗ ಎರಡನೇ ಹಂತದ ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿಟ್ಟಿದ್ದ ಸಿ.ಪಿ. ಯೋಗೇಶ್ವರ್ ಕ್ರಿಯಾಯೋಜನೆಗೆ ಸರ್ಕಾರದಿಂದ 128.74 ಕೋಟಿ ರೂ. ಅನುದಾನವನ್ನು ನೀಡಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.
ಯುಜಿಡಿಯ ಎರಡನೇ ಹಂತದ ಕಾಮಗಾರಿಗೆ ಈಗಾಗಲೆ 94 ಕೋಟಿ ರೂ. ಮಂಜೂರಾತಿ ಆಗಿದ್ದು ಟೆಂಡರ್ ಪ್ರಕ್ರಿಯೆ ಸಹ ನಡೆದಿತ್ತು. ಆದರೆ, ಯುಜಿಡಿಯಲ್ಲಿ ಬರುವ ವಿಶೇಷ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ ಮಾಡಲು 2015 ರಲ್ಲಿ ಕೂಡ್ಲೂರು ಬಳಿ ನಗರಸಭೆಯಿಂದ ಖರೀದಿಸಿದ್ದ ಜಮೀನಿನಲ್ಲಿ ಎಸ್‌ಟಿಪಿ ಘಟಕ ನಿರ್ಮಾಣ ಮಾಡಲು ಸಮಸ್ಯೆ ಆಗಿತ್ತು. ಈ ಹಿನ್ನೆಲೆಯಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ನಗರ ಪ್ರದೇಶದಲ್ಲೇ ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಅಗತ್ಯ ಜಮೀನನ್ನು ಭೂಸ್ವಾಧೀನ ಮಾಡುವ ಪ್ರಕ್ರಿಯೆಗೆ ಶಾಸಕ ಸಿ.ಪಿ.ಯೋಗೇಶ್ವರ್ ಕ್ರಮ ಕೈಗೊಂಡು, ಭೂಸ್ವಾಧೀನ ಹಾಗೂ ಪೈಪ್‌ಪೈನ್ ಸೇರಿದಂತೆ ಹಳೆ 94 ಕೋಟಿ ರೂ. ಅನುದಾನದ ಜೊತೆಗೆ ಹೆಚ್ಚುವರಿಯಾಗಿ ಕ್ರಿಯಾಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದ್ದರು. ಇದೀಗ, ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿಸಿ ಆಡಳಿತಾತ್ಮಕ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
===
ನಗರದ ಯುಜಿಡಿಯ ಎರಡನೇ ಹಂತದ ಕಾಮಗಾರಿಗೆ 128.74 ಕೋಟಿ ರೂ. ವೆಚ್ಚದಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಯುಜಿಡಿಯ ಎರಡನೇ ಹಂತದ ಕಾಮಗಾರಿಗೆ ಟೆಂಟರ್ ಪ್ರಕ್ರಿಯೆ ಮಾಡಲಾಗುತ್ತದೆ. ತ್ವರಿತವಾಗಿ ಈ ಪ್ರಕ್ರಿಯೆಗಳು ನಡೆಯುತ್ತವೆ.
- ಸಿ.ಪಿ.ಯೋಗೇಶ್ವರ್ ಶಾಸಕ ಚನ್ನಪಟ್ಟಣ.